ನಗರದ ಹುಳಿಮಾವು ಪೊಲೀಸರು ರಕ್ತ ಚಂದನ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಒಟ್ಟು 1,143 ಕೆ.ಜಿ ರಕ್ತ ಚಂದನಮರದ ತುಂಡುಗಳು ಮತ್ತು ಕೃತ್ಯಕ್ಕೆ ಬಳಸಲಾದ ಮೂರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 1 ಕೋಟಿ ಎಂದು ಅಂದಾಜಿಸಲಾಗಿದೆ.
ದಿನಾಂಕ: 07/11/2025 ರಂದು ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬನ್ನೇರಘಟ್ಟ ಮುಖ್ಯ ರಸ್ತೆ, ಗೊಟ್ಟಿಗೆರೆ ಕೆರೆಯ ಬಳಿ ದಾಳಿ ನಡೆಸಿ, ಓರ್ವ ವ್ಯಕ್ತಿಯನ್ನು ಬಂಧಿಸಿ 95 ಕೆ.ಜಿ ರಕ್ತ ಚಂದನ ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದರು.
ತದನಂತರ ನ್ಯಾಯಾಲಯದ ಅನುಮತಿ ಪಡೆದು ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ, ಆಂಧ್ರಪ್ರದೇಶದಿಂದ ಕಡಿಮೆ ಬೆಲೆಗೆ ತುಂಡುಗಳನ್ನು ತಂದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಆರೋಪಿಯು ನೀಡಿದ ಮಾಹಿತಿಯ ಮೇರೆಗೆ ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಹೆಚ್ಚುವರಿ 1,048 ಕೆ.ಜಿ ರಕ್ತ ಚಂದನ ಮತ್ತು 2 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಸಹಚರರಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ತನಿಖೆ ಪ್ರಗತಿಯಲ್ಲಿದೆ.
ಈ ಕಾರ್ಯಾಚರಣೆಯನ್ನು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಎಂ.ನಾರಾಯಣ, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಉಪ-ವಿಭಾಗದ ಎ.ಸಿ.ಪಿ ರವರಾದ ಶ್ರೀ ಕೆ.ಎಂ ಸತೀಶ ರವರ ಉಸ್ತುವಾರಿಯಲ್ಲಿ ಹುಳಿಮಾವು ಪೊಲಿಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಬಿ.ಜಿ.ಕುಮಾರಸ್ವಾಮಿ,ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.








