ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಾದ ವಂಚನೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪಿರ್ಯಾದುದಾರರು ಲೈಂಗಿಕ ಸಮಸ್ಯೆಗೆ ಔಷಧಿ ಪಡೆಯಲು, ರಸ್ತೆ ಬದಿಯಲ್ಲಿ ಟೆಂಟ್ ಹಾಕಿದ್ದ ಈ ವಂಚಕರ ಬಳಿ ಹೋಗಿದ್ದರು.
ಆರೋಪಿಗಳು ಉತ್ತಮ ಗುಣಮಟ್ಟದ ಆಯುರ್ವೇದಿಕ್ ಔಷಧಿ ನೀಡುವುದಾಗಿ ನಂಬಿಸಿ, ಪಿರ್ಯಾದುದಾರರಿಂದ ಬರೋಬ್ಬರಿ 48 ಲಕ್ಷ ನಗದು ಪಡೆದು, ಕಳಪೆ ಗುಣಮಟ್ಟದ ಔಷಧಿಯನ್ನು ನೀಡಿದ್ದರು. ಇದರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮ ಉಂಟಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ನವೆಂಬರ್ 27 ಮತ್ತು ಡಿಸೆಂಬರ್1 ರಂದು ತೆಲಂಗಾಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ವಶದಿಂದ ಒಟ್ಟು 17 ವಿವಿಧಬಗೆಯ ಆಯುರ್ವೇದಿಕ್ ಔಷಧಿಗಳು, ₹ 19.50 ಲಕ್ಷ ನಗದು, ಹಾಗೂ ಕೃತ್ಯಕ್ಕೆ ಬಳಸಿದ್ದ ಟೆಂಪೋ ಟ್ರಾವೆಲರ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ₹ 23.50 ಲಕ್ಷ ಎಂದು ಅಂದಾಜಿಸಲಾಗಿದೆ.
ವಿಚಾರಣೆ ವೇಳೆ, ಈ ಇಬ್ಬರು ಆರೋಪಿಗಳು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ರಸ್ತೆಬದಿ ಟೆಂಟ್ಗಳನ್ನು ಹಾಕಿಕೊಂಡು, ಸಮಸ್ಯೆಗಳೊಂದಿಗೆ ಬರುವವರಿಗೆ ಕಳಪೆ ದರ್ಜೆಯ ಔಷಧಿಗಳನ್ನು ನೀಡಿ ವಂಚಿಸುತ್ತಿರುವುದು ಬಯಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಯನ್ನು ನೈರುತ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ ಅನಿತಾ ಬಿ. ಹದ್ದಣ್ಣವರ್, ಐ.ಪಿ.ಎಸ್ ಹಾಗೂ ಕೆಂಗೇರಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಶ್ರೀ.ಬಸವರಾಜ್ ತೇಲಿ ರವರ ಮಾರ್ಗದರ್ಶನದಲ್ಲಿ, ಜ್ಞಾನಭಾರತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ರವಿ.ಎಂ.ಎಸ್ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಯವರು ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.







