ಬೆಂಗಳೂರಿನಲ್ಲಿ ನಡೆದಿದ್ದ 7.11 ಕೋಟಿ ರೂ ದರೋಡೆ ಪ್ರಕರಣದಲ್ಲಿ ಪೊಲೀಸರು 7.01 ಕೋಟಿ (ಶೇ.98) ಹಣವನ್ನು ರಿಕವರಿ ಮಾಡಿದ್ದಾರೆ. ಈವರೆಗೆ 9 ಆರೋಪಿಗಳನ್ನು ಬಂಧಿಸಿದ್ದಾರೆ. ನಗರ ಪೊಲೀಸ್ ಆಯುಕ್ತರು ತಂಡದ ಕಾರ್ಯವನ್ನು ಶ್ಲಾಘಿಸಿದ್ದು, ಹೆಚ್ಚುವರಿ ಬಹುಮಾನ ಘೋಷಿಸಿದ್ದಾರೆ. ಇನ್ನು CMS ಸಿಬ್ಬಂದಿ ವಿಚಾರಣೆ ವೇಳೆ ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿವೆ.
ನಗರದಲ್ಲಿ ಹಾಡಹಗಲೇ ನಡೆದಿದ್ದ 7 ಕೋಟಿ 11 ಲಕ್ಷ ರೂ. ದರೋಡೆ ಪ್ರಕರಣವನ್ನು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಗಂಭೀರವಾಗಿ ಪರಿಗಣಿಸಿದ್ದಾರೆ. ಈವರೆಗೆ 7.01 ಕೋಟಿ ರೂ. ರಿಕವರಿ ಆಗಿದೆ ಎಂದು ಸ್ವತಃ ಅವರೇ ಹೇಳಿದ್ದಾರೆ. ಈ ಮಧ್ಯೆ ಇತ್ತ ಸಿದ್ದಾಪುರ ಠಾಣೆ ಪೊಲೀಸರು CMS ವಾಹನ ಸಿಬ್ಬಂದಿ ವಿಚಾರಣೆ ವೇಳೆ ಮತ್ತಷ್ಟು ಸಂಗತಿಗಳು ಬೆಳಕಿಗೆ ಬಂದಿವೆ. ಅಷ್ಟು ದೊಡ್ಡ ದರೋಡೆ ನಡೆದಿದ್ದರೂ ಸಿಬ್ಬಂದಿಗೆ ಊಟವೇ ಮುಖ್ಯವಾಗಿತ್ತು. ಹೀಗಾಗಿ ಪೊಲೀಸರಿಗೆ ಮತ್ತಷ್ಟು ಅನುಮಾನಗಳು ಹುಟ್ಟಿಕೊಂಡಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಈವರೆಗೆ 7.01 ಕೋಟಿ ರಿಕವರಿ ಆಗಿದೆ. ನಮ್ಮ ಪೊಲೀಸರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿ ಶೇಕಡಾ 98.06ರಷ್ಟು ಹಣ ರಿಕವರಿ ಆಗಿದೆ. ಈವರೆಗೆ 9 ಆರೋಪಿಗಳ ಬಂಧನ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಚೆನ್ನೈ, ಆಂಧ್ರ ಪೊಲೀಸರು ಸಹ ಸಾಕಷ್ಟು ಸಹಾಯ ಮಾಡಿದ್ದಾರೆ. ಈಗಾಗಲೇ ತಂಡಕ್ಕೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಹೆಚ್ಚುವರಿಯಾಗಿ 2 ಲಕ್ಷ ರೂ. ಬಹುಮಾನ ನೀಡುತ್ತಿದ್ದೇವೆ.9 ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಂತ್ ಕುಮಾರ್ ಸಿಂಗ್, ಐ.ಪಿ.ಎಸ್, ಜಂಟಿ ಪೊಲೀಸ್ ಆಯುಕ್ತರು ಪಶ್ಚಿಮ ಶ್ರೀ ಸಿ.ವಂಶಿಕೃಷ್ಣ, ಐ.ಪಿ.ಎಸ್, ಜಂಟಿ ಪೊಲೀಸ್ ಆಯುಕ್ತರು ಅಪರಾಧ ಶ್ರೀ ಅಜಯ್ ಹಿಲೋರಿ, ಐ.ಪಿ.ಎಸ್, ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಶ್ರೀ.ಲೊಕೇಶ್.ಬಿ ಜಗಲಾಸರ್, ಐ.ಪಿ.ಎಸ್ ಮತ್ತು ಉಪ-ಪೊಲೀಸ್ ಆಯುಕ್ತರು ಅಪರಾಧ ಶ್ರೀ ಹರಿಬಾಬು.ಬಿ.ಎಲ್, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ದಕ್ಷಿಣ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಮತ್ತು ಬೆಂಗಳೂರು ನಗರ, ಸಿಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.









