ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬ್ರೆಡ್ ಪ್ಯಾಕೆಟ್‌ಗಳಲ್ಲಿ ಮಾದಕ ವಸ್ತು ಅಡಗಿಸಿ ಮುಂಬೈನಿಂದ ಬೆಂಗಳೂರಿಗೆ ಕೊಕೇನ್ ಸಾಗಿಸುತ್ತಿದ್ದ ವಿದೇಶಿ ಮಹಿಳಾ ಡ್ರಗ್ ಪೆಡ್ಲರ್ ಅನ್ನು ಬಂಧಿಸಿದ್ದಾರೆ. ಬಂಧಿತೆಯಿಂದ ಬರೋಬ್ಬರಿ 1.20 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಮಹಿಳೆಯು 2024ರಲ್ಲಿ ದೆಹಲಿಯ ಯೂನಿವರ್ಸಿಟಿಯೊಂದರಲ್ಲಿ ವ್ಯಾಸಂಗ ಮಾಡುವುದಾಗಿ ವೀಸಾ ಪಡೆದು ಭಾರತಕ್ಕೆ ಬಂದಿದ್ದಳು. ಆದರೆ ಕಾಲೇಜಿಗೆ ಸೇರದೆ ಮುಂಬೈನಲ್ಲಿ ನೆಲೆಸಿ, ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದಳು ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಈಕೆಯು ಮುಂಬೈನಿಂದ ಬೆಂಗಳೂರಿಗೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಳು. ಯಾರಿಗೂ ಸಂಶಯ ಬಾರದಂತೆ ಕೊಕೇನ್ ಅನ್ನು ಬ್ರೆಡ್ ಮತ್ತು ಇತರ ಆಹಾರ ಉತ್ಪನ್ನಗಳ ಕವರ್‌ಗಳಲ್ಲಿ ಪ್ಯಾಕ್ ಮಾಡಿ ಸಾಗಿಸುತ್ತಿದ್ದಳು.
ವಶಪಡಿಸಿಕೊಂಡ ಮಾಲು: 121 ಗ್ರಾಂ ಕೊಕೇನ್(ಮೌಲ್ಯ ಅಂದಾಜು 1.20 ಕೋಟಿ).
ಈ ಕಾರ್ಯಾಚರಣೆಯನ್ನು, ಶ್ರೀ. ರಾಜಾ ಇಮಾಮ್ ಕಾಸಿಂ ಪಿ, ಉಪ ಪೊಲೀಸ್ ಅಪರಾಧ-2, ಬೆಂಗಳೂರು ನಗರ ರವರುಗಳ ಮೇಲ್ವಿಚಾರಣೆಯಲ್ಲಿ, ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಎಸಿಪಿ ರವರಾದ ಶ್ರೀ. ಹೆಚ್.ಕೆ. ಮಹಾನಂದ್ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ರವರಾದ ಶ್ರೀರಕ್ಷಿತ್ ಎಕೆ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.







