ಮನೆಗೆಲಸಕ್ಕೆ ಸೇರಿಕೊಂಡ ಕೆಲವೇ ದಿನಗಳಲ್ಲಿ ಮಾಲೀಕರ ನಂಬಿಕೆಗೆ ದ್ರೋಹ ಬಗೆದು, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ದುಬಾರಿ ವಾಚ್‌ಗಳನ್ನು ದೋಚಿದ್ದ ದಂಪತಿಯನ್ನು ಸದಾಶಿವನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1.37 ಕೋಟಿ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸದಾಶಿವನಗರದ 8ನೇ ‘ಎ’ ಮುಖ್ಯರಸ್ತೆಯ ನಿವಾಸಿಯೊಬ್ಬರು ಕಳೆದ ಡಿಸೆಂಬರ್ 30 ರಂದು ಹೊಸ ವರ್ಷದ ಆಚರಣೆಗಾಗಿ ಕುಟುಂಬ ಸಮೇತ ಹೊರರಾಜ್ಯಕ್ಕೆ ತೆರಳಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಮನೆಗೆಲಸದಾಕೆ, ತನ್ನ ಪತಿಯನ್ನು ಕರೆಸಿಕೊಂಡು ಬೀರು ಒಡೆದು ಅದರಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ವಾಚ್‌ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಳು. ಮನೆಯ ಬೀರು ಒಡೆದಿರುವುದನ್ನು ಗಮನಿಸಿದ ಮಾಲೀಕರ ಅತ್ತೆ ನೀಡಿದ ಮಾಹಿತಿಯ ಮೇರೆಗೆ, ಮಾಲೀಕರು ಡಿಸೆಂಬರ್ 31 ರಂದು ದೂರು ದಾಖಲಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿ, ಕೇವಲ ಐದೇ ದಿನಗಳಲ್ಲಿ ಅಂದರೆ ಜನವರಿ 5 ರಂದು ಆರೋಪಿಗಳನ್ನು ಕೋರಮಂಗಲದಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.
787.66 ಗ್ರಾಂ ಚಿನ್ನಾಭರಣ. 291.08 ಗ್ರಾಂ ಬೆಳ್ಳಿಯ ಆಭರಣಗಳು.7 ಅತ್ಯಂತ ದುಬಾರಿ ಕೈಗಡಿಯಾರಗಳು ವಶಪಡಿಸಿಕೊಂಡಿದ್ದಾರೆ.ಇವುಗಳ ಒಟ್ಟು ಮೌಲ್ಯ ಅಂದಾಜು 1,37,27,000ರೂಪಾಯಿಗಳು.
ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ ಹಾಕೆ ಮತ್ತು ಎಸಿಪಿ ಪ್ರಕಾಶ್ ಆರ್ ಅವರ ಮಾರ್ಗದರ್ಶನದಲ್ಲಿ, ಸದಾಶಿವನಗರ ಇನ್ಸ್‌ಪೆಕ್ಟರ್ ಪ್ರದೀಪ್ ಬಿ ಮತ್ತು ತಂಡವು ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮನೆಗೆಲಸದವರನ್ನು ನೇಮಿಸಿಕೊಳ್ಳುವಾಗ ಅವರ ಪೂರ್ವಾಪರಗಳನ್ನು ಸರಿಯಾಗಿ ಪರಿಶೀಲಿಸುವುದು ಅತ್ಯಗತ್ಯ ಎಂದು ಪೊಲೀಸರು ಈ ಮೂಲಕ ತಿಳಿಸಿದ್ದಾರೆ.








