ಬೆಂಗಳೂರಿನ ಜೆ.ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಭಾರೀ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಮೆರಿಕಾ ಮೂಲದ ದಂಪತಿಗಳು ಕೆಲಸಕ್ಕೆ ಹೋದ ಸಮಯ ಸಾಧಿಸಿ, ಮನೆಯಲ್ಲಿದ್ದ ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ಕಳವು ಮಾಡಿದ್ದ ಮನೆಗೆಲಸದವನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಡಿಹಳ್ಳಿಯ ರುಸ್ತುಂಭಾಗ್ ಮುಖ್ಯರಸ್ತೆಯ ವಿಲ್ಲಾದಲ್ಲಿ ವಾಸವಿರುವ ದಂಪತಿಗಳು ಜನವರಿ 21ರಂದು ಕೆಲಸ ಮುಗಿಸಿ ಮನೆಗೆ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ. ಬೀರುವಿನ ಲಾಕರ್‌ನಲ್ಲಿದ್ದ ಆಭರಣಗಳು ನಾಪತ್ತೆಯಾಗಿದ್ದವು. ಮನೆಯಲ್ಲಿ ಕಳೆದ ಆರು ತಿಂಗಳಿಂದ ಕೆಲಸಕ್ಕಿದ್ದ ವ್ಯಕ್ತಿಯ ಮೇಲೆ ಸಂಶಯ ವ್ಯಕ್ತಪಡಿಸಿ ಮಾಲೀಕರು ದೂರು ನೀಡಿದ್ದರು.
ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಜೆ.ಬಿ ನಗರ ಪೊಲೀಸರು, ವಿಲ್ಲಾದ ಬಳಿಯೇ ಆರೋಪಿಯನ್ನು ವಶಕ್ಕೆ ಪಡೆದರು. ವಿಚಾರಣೆ ವೇಳೆ ಸುಧಾಮನಗರದಲ್ಲಿರುವ ತನ್ನ ಮನೆಯಲ್ಲಿ ಕದ್ದ ಮಾಲನ್ನು ಬಚ್ಚಿಟ್ಟಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನ ಮನೆಯಿಂದ 176 ಗ್ರಾಂ ಚಿನ್ನ, ವಜ್ರಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ಪೂರ್ವ ವಿಭಾಗದ ಡಿಸಿಪಿ ಡಾ. ವಿಕ್ರಮ್ ಅಮಟೆ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಬಸವರಾಜು ಎಂ ಮತ್ತು ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.






