ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಡೇರಹಳ್ಳಿಯ ವಿಲ್ಲಾವೊಂದರಲ್ಲಿ ನಡೆದಿದ್ದ ಬೃಹತ್ ಕಳವು ಪ್ರಕರಣವನ್ನು ಭೇದಿಸುವಲ್ಲಿ ಈಶಾನ್ಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಒಟ್ಟು 1.03 ಕೋಟಿ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿಸೆಂಬರ್ 23 ರಂದು ವಿಲ್ಲಾದ ಮಾಲೀಕರು ಕುಟುಂಬ ಸಮೇತ ಮಹಾರಾಷ್ಟ್ರ ಪ್ರವಾಸಕ್ಕೆ ತೆರಳಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಮನೆಯ ಕಾರು ಚಾಲಕ ಮತ್ತು ಮನೆಗೆಲಸದವನು, ತಮ್ಮಿಬ್ಬರು ಸ್ನೇಹಿತರಿಗೆ ಮನೆಯ ಹಿಂಬಾಗಿಲಿನ ಕೀ ನೀಡಿ ಕಳವು ಮಾಡಲು ಸಂಚು ರೂಪಿಸಿದ್ದರು. ಮಾಲೀಕರು ವಾಪಸ್ ಬಂದಾಗ ಬೀರುವಿನಲ್ಲಿದ್ದ ಚಿನ್ನ, ಬೆಳ್ಳಿ ಮತ್ತು ನಗದು ಕಳುವಾಗಿರುವುದು ಬೆಳಕಿಗೆ ಬಂದಿತ್ತು.

ತನಿಖೆ ಕೈಗೆತ್ತಿಕೊಂಡ ಇನ್ಸ್‌ಪೆಕ್ಟರ್ ಶಿವಸ್ವಾಮಿ ಸಿ.ಬಿ. ನೇತೃತ್ವದ ತಂಡ, ಮೊದಲು ಚಿತ್ರದುರ್ಗದ ಹೊಸದುರ್ಗದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಿತು. ಅವರ ನೀಡಿದ ಮಾಹಿತಿಯ ಮೇರೆಗೆ ಮನೆಯಲ್ಲೇ ಇದ್ದ ಕಾರು ಚಾಲಕ ಹಾಗೂ ಕೆಲಸಗಾರನನ್ನು ಬಂಧಿಸಲಾಯಿತು.
550 ಗ್ರಾಂ ಚಿನ್ನಾಭರಣ. 4 ಕೆ.ಜಿ ಬೆಳ್ಳಿಯ ವಸ್ತುಗಳು. 4 ಲಕ್ಷ ರೂಪಾಯಿ ನಗದು ಹಣ. 1 ದ್ವಿಚಕ್ರ ವಾಹನ. ಒಟ್ಟು ಮೌಲ್ಯ: ಸುಮಾರು 1 ಕೋಟಿ 3 ಲಕ್ಷ ರೂಪಾಯಿ.
ಡಿಸಿಪಿ ಜಿ.ಕೆ ಮಿಥುನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಕಳುವಾದ ಬಹುತೇಕ ಎಲ್ಲ ಸ್ವತ್ತುಗಳನ್ನು ಕೇವಲ ಒಂದು ವಾರದ ಅವಧಿಯಲ್ಲಿ ಮರುಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.








