ಬೆಂಗಳೂರಿನ ಕೆ.ಆರ್.ಪುರಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಂತರರಾಜ್ಯ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ 60 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.ಕಳೆದ ನವೆಂಬರ್ 7 ರಂದು ಅಯ್ಯಪ್ಪ ನಗರದ ನಿವಾಸಿಯೊಬ್ಬರು ತಮ್ಮ ಮನೆಯ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬೈಕ್ ಕಳುವಾಗಿರುವ ಬಗ್ಗೆ ಕೆ.ಆರ್.ಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಇನ್ಸ್‌ಪೆಕ್ಟರ್ ಬಿ. ರಾಮಮೂರ್ತಿ ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಹಾಗೂ ಬಾತ್ಮೀದಾರರ ನೆರವಿನಿಂದ ತಮಿಳುನಾಡಿನ ಒಡಗತ್ತೂರಿನಲ್ಲಿ ಇಬ್ಬರು ಆರೋಪಿಗಳನ್ನು ಮೊದಲು ಬಂಧಿಸಿತ್ತು.
ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ಸುದೀರ್ಘ ವಿಚಾರಣೆ ನಡೆಸಿದಾಗ, ಅವರ ಸಹಚರರ ಬಗ್ಗೆ ಮಾಹಿತಿ ಲಭ್ಯವಾಯಿತು. ಇದರ ಆಧಾರದ ಮೇಲೆ ಕೊಯಂಬತ್ತೂರಿನಲ್ಲಿ ಇನ್ನುಳಿದ ಇಬ್ಬರು ಆರೋಪಿಗಳನ್ನು ಪೊಲೀಸರು ಸೆರೆಹಿಡಿದಿದ್ದಾರೆ.

ವೇಲೂರು ಜಿಲ್ಲೆಯ ಗುರುರಾಜ್ ಪಾಳ್ಯದಿಂದ 45 ಬೈಕ್‌ಗಳು.ತಿರುಪತ್ತೂರು ಜಿಲ್ಲೆಯ ಗುಡಿಯಾತಮ್ ರಸ್ತೆ ಸಮೀಪದಿಂದ 06 ಬೈಕ್‌ಗಳು.ಆರೋಪಿಗಳ ಸಂಬಂಧಿಕರಿಂದ 09 ಬೈಕ್‌ಗಳುವಶಪಡಿಸಿಕೊಂಡಿದ್ದಾರೆ.
ಬಂಧಿತರಿಂದ ಕೆ.ಆರ್. ಪುರಂ, ಬೇಗೂರು, ಎಲೆಕ್ಟ್ರಾನಿಕ್ ಸಿಟಿ, ವಿಲ್ಸನ್ ಗಾರ್ಡನ್ ಹಾಗೂ ಆಂಧ್ರಪ್ರದೇಶದ ಚಿತ್ತೂರು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 8 ಪ್ರಕರಣಗಳು ಸದ್ಯಕ್ಕೆ ಪತ್ತೆಯಾಗಿವೆ. ಇನ್ನುಳಿದ 52 ವಾಹನಗಳ ವಾರಸುದಾರರ ಪತ್ತೆ ಕಾರ್ಯ ಹಾಗೂ ತಲೆಮರೆಸಿಕೊಂಡಿರುವ ಇತರೆ ಮೂವರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ.
ವೈಟ್ ಫೀಲ್ಡ್ ಡಿಸಿಪಿ ಸೈದುಲು ಅಡಾವತ್ಮತ್ತು ಎಸಿಪಿ ರೀನಾ ಸುವರ್ಣಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಸದ್ಯಕ್ಕೆ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.







