ಬೆಂಗಳೂರಿನ ಜೆ.ಪಿ.ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳವು ಮಾಡುತ್ತಿದ್ದ ಅಂತರರಾಜ್ಯ ಕಳ್ಳನನ್ನು ಬಂಧಿಸಿದ್ದಾರೆ. ಬಂಧಿತನಿಂದ ಬರೋಬ್ಬರಿ 65 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಜೆ.ಪಿ. ನಗರದ ನಿವಾಸಿಯಾದ ಮೇಕಪ್ ಆರ್ಟಿಸ್ಟ್ ಹಾಗೂ ಸೀರಿಯಲ್ ನಟರೊಬ್ಬರ ಮನೆಯಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಕಳವು ನಡೆದಿತ್ತು. ಮನೆಯ ಕೀಯನ್ನು ಚಪ್ಪಲಿ ಬಾಕ್ಸ್‌ನಲ್ಲಿ ಇಟ್ಟು ಹೋದದ್ದನ್ನೇ ಸಂಚನ್ನಾಗಿಸಿಕೊಂಡ ಕಳ್ಳ, ಮನೆಯಲ್ಲಿದ್ದ ಬೆಲೆಬಾಳುವ ಆಭರಣಗಳನ್ನು ದೋಚಿದ್ದನು.
ಪ್ರಕರಣ ದಾಖಲಿಸಿಕೊಂಡ ಜೆ.ಪಿ. ನಗರ ಪೊಲೀಸರು ತನಿಖೆ ಚುರುಕುಗೊಳಿಸಿ, ನಾಗವಾರ ಸರ್ಕಲ್ ಬಳಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಸಾರಾಯಿ ಪಾಳ್ಯದ ತನ್ನ ನಿವಾಸ ಹಾಗೂ ಚೆನ್ನರಾಯಪಟ್ಟಣದ ಜ್ಯೂವೆಲರಿ ಶಾಪ್‌ನಲ್ಲಿ ಅಡಗಿಸಿಟ್ಟಿದ್ದ ಮಾಲನ್ನು ಪತ್ತೆ ಹಚ್ಚಲಾಗಿದೆ.
478 ಗ್ರಾಂ ಚಿನ್ನದ ಆಭರಣಗಳು ಮತ್ತು ಗಟ್ಟಿಗಳು.1 ಕೆ.ಜಿ 550 ಗ್ರಾಂ ಬೆಳ್ಳಿಯ ವಸ್ತುಗಳು.4 ಲಕ್ಷದ 60 ಸಾವಿರ ರೂಪಾಯಿ ನಗದು.ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ.ವಶಪಡಿಸಿಕೊಂಡ ಒಟ್ಟು ಮಾಲಿನ ಮೌಲ್ಯ 65.28 ಲಕ್ಷ ರೂಪಾಯಿ.
ಆರೋಪಿಯ ಬಂಧನದಿಂದ ಜೆ.ಪಿ.ನಗರ ಮಾತ್ರವಲ್ಲದೆ ಭಾಲ್ಕಿ, ಸಂತೆಮಾರಳ್ಳಿ, ಮಳವಳ್ಳಿ ಹಾಗೂ ಹುಣಸೂರು ಸೇರಿದಂತೆ ಒಟ್ಟು 7 ಕಳವು ಪ್ರಕರಣಗಳು ಸುಖಾಂತ್ಯ ಕಂಡಿವೆ.
ಜೆ.ಪಿ.ನಗರ ಪೊಲೀಸ್ ಇನ್ಸ್‌ಪೆಕ್ಟರ್ ಹರೀಶ್ ವಿ. ಮತ್ತು ಅವರ ತಂಡದ ಈ ಸಮಯೋಚಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.







