ಬೆಂಗಳೂರಿನಲ್ಲಿ ಮಾದಕ ದ್ರವ್ಯ ಜಾಲದ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ. ಜಾಲಹಳ್ಳಿ ಪೊಲೀಸರು ಮಿಂಚಿನ ದಾಳಿ ನಡೆಸಿ, ನಿಷೇಧಿತ ಹೈಡ್ರೋ ಗಾಂಜಾ ಹಾಗೂ ಎಂಡಿಎಂಎ ಮಾರಾಟ ಮಾಡುತ್ತಿದ್ದ ಹೊರ ರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 27 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ.
ಜಾಲಹಳ್ಳಿ ಠಾಣಾ ವ್ಯಾಪ್ತಿಯ ಕಾಳಿಂಗರಾವ್ ಸರ್ಕಲ್ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಲಭ್ಯವಾದ ಖಚಿತ ಮಾಹಿತಿಯ ಮೇರೆಗೆ ಇನ್ಸ್‌ಪೆಕ್ಟರ್ ಶಿವಕುಮಾರ್ ಟಿ.ಸಿ. ಮತ್ತು ತಂಡ ದಾಳಿ ನಡೆಸಿದೆ.ಬಂಧಿತ ಆರೋಪಿಗಳಿಂದ 247 ಗ್ರಾಂ ಹೈಡ್ರೋ ಗಾಂಜಾ ಮತ್ತು 19 ಗ್ರಾಂ ಎಂ.ಡಿ.ಎಂ.ಎ (MDMA) ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ಅಂದಾಜು 6.90 ಲಕ್ಷ ಎಂದು ಅಂದಾಜಿಸಲಾಗಿದೆ.
ಹೆಚ್ಚಿನ ಹಣ ಗಳಿಸುವ ಆಸೆಯಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ, ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.ಆರೋಪಿಗಳ ವಿರುದ್ಧ ಎನ್.ಡಿ.ಪಿ.ಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ಹಾಗೂ ಎಸಿಪಿ ಮೇರಿ ಶೈಲಜಾ ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.








