ಬೆಂಗಳೂರಿನ ಸಿದ್ದಾಪುರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ, ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಮೂವರು ರೂಢಿಗತ (Habitual) ಕಳ್ಳರನ್ನು ಬಂಧಿಸಿದ್ದಾರೆ. ಬೆರಳಚ್ಚು ತಜ್ಞರ ನೆರವಿನಿಂದ ಆರೋಪಿಗಳನ್ನು ಪತ್ತೆಹಚ್ಚಲಾಗಿದ್ದು, ಬಂಧಿತರಿಂದ ಸುಮಾರು 31 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ನವೆಂಬರ್ 17 ರಂದು ಬೈರಸಂದ್ರದ ನಿವಾಸಿಯೊಬ್ಬರು ಮನೆಯ ಬೀಗ ಹಾಕಿ ಸ್ನೇಹಿತನ ಮನೆಗೆ ಹೋಗಿದ್ದಾಗ, ಮುಂಜಾನೆ ಸಮಯದಲ್ಲಿ ಕಳ್ಳರು ಮುಂಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದರು. ಬೀರುವಿನಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಹಳೆಯ ಅಪರಾಧಿಗಳ (M.O.B) ಪಟ್ಟಿಯನ್ನು ಪರಿಶೀಲಿಸಿದಾಗ ಒಬ್ಬ ಆರೋಪಿಯ ಚಹರೆ ಪತ್ತೆಯಾಗಿದೆ. ಬಳಿಕ ಫಿಂಗರ್ ಪ್ರಿಂಟ್ ತಜ್ಞರ ವರದಿಯ ಆಧಾರದ ಮೇಲೆ ಕಳ್ಳರನ್ನು ಖಚಿತಪಡಿಸಿಕೊಳ್ಳಲಾಯಿತು.
ಇನ್ಸ್‌ಪೆಕ್ಟರ್ ಮೋಹನ್ ಡಿ. ಪಟೇಲ್ ನೇತೃತ್ವದ ತಂಡ ತಿಲಕ್‌ನಗರದಲ್ಲಿ ಮೊದಲ ಆರೋಪಿಯನ್ನು ಬಂಧಿಸಿತು. ಆತ ನೀಡಿದ ಮಾಹಿತಿಯ ಮೇರೆಗೆ ಕೋರಮಂಗಲದಲ್ಲಿ ಮತ್ತೊಬ್ಬ ಸಹಚರನನ್ನು ಮತ್ತು ಜೈಲಿನಲ್ಲಿದ್ದ ಮತ್ತೋರ್ವನನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.
ಬಂಧಿತರಿಂದ ಒಟ್ಟು 257 ಗ್ರಾಂ ಚಿನ್ನಾಭರಣ ಹಾಗೂ 1 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 31,27,000/– (ಮೂವತ್ತೊಂದು ಲಕ್ಷದ ಇಪ್ಪತ್ತೇಳು ಸಾವಿರ ರೂಪಾಯಿ).
ಈ ಕಾರ್ಯಾಚರಣೆಯ ಮೂಲಕ ಸಿದ್ದಾಪುರ ಠಾಣೆಯ ಎರಡು ಪ್ರಮುಖ ಕಳವು ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ಹಾಗೂ ಎಸಿಪಿ ನಾರಾಯಣಸ್ವಾಮಿ ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಪತ್ತೆ ಕಾರ್ಯ ನಡೆದಿದೆ.







