ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪಿಜಿ (PG) ಗಳಲ್ಲಿ ನುಗ್ಗಿ ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದ ತಮಿಳುನಾಡು ಮೂಲದ ಇಬ್ಬರು ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ 48 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ನವೆಂಬರ್ 28ರಂದು ದೊಡ್ಡ ತೋಗೂರಿನ ಪಿಜಿಯೊಂದರಲ್ಲಿ ಬಾಗಿಲು ತೆರೆದಿದ್ದ ರೂಮ್‌ಗೆ ನುಗ್ಗಿದ್ದ ಕಳ್ಳರು, ಮೂರು ಲ್ಯಾಪ್‌ಟಾಪ್‌ಗಳನ್ನು ಎಗರಿಸಿದ್ದರು. ಈ ಬಗ್ಗೆ ದಾಖಲಾದ ದೂರಿನ ಬೆನ್ನತ್ತಿದ ಇನ್ಸ್‌ಪೆಕ್ಟರ್ ನವೀನ್ ಜಿ.ಎಮ್. ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಮತ್ತು ಬಾತ್ಮೀದಾರರ ನೆರವಿನಿಂದ ತಮಿಳುನಾಡಿನ ಕಲಕುರ್ಚಿಯಲ್ಲಿ ಮೊದಲ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮೊದಲ ಆರೋಪಿ ಪಿಜಿಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರೆ, ಆತನ ಸಹಚರ ಅತ್ತಿಬೆಲೆಯಲ್ಲಿ ಕುಳಿತು ಮಾರಾಟದ ಜಾಲವನ್ನು ನೋಡಿಕೊಳ್ಳುತ್ತಿದ್ದನು.

ಪೊಲೀಸ್ ವಿಚಾರಣೆಯ ವೇಳೆ ಆರೋಪಿಗಳು ನೀಡಿದ ಮಾಹಿತಿ ಅನ್ವಯ, ತಮಿಳುನಾಡು ಮತ್ತು ಬೆಂಗಳೂರಿನ ವಿವಿಧೆಡೆ ಮಾರಾಟ ಮಾಡಿದ್ದ ಹಾಗೂ ಮನೆಯಲ್ಲಿ ಅಡಗಿಸಿಟ್ಟಿದ್ದ ಒಟ್ಟು 48 ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಂಧನದಿಂದ ಎಲೆಕ್ಟ್ರಾನಿಕ್ ಸಿಟಿ ಠಾಣೆಯ 9 ಮತ್ತು ಬಂಡೆಪಾಳ್ಯ ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು 10 ಕಳವು ಪ್ರಕರಣಗಳು ಸದ್ಯಕ್ಕೆ ಪತ್ತೆಯಾಗಿವೆ.
ಉಳಿದ 38 ಲ್ಯಾಪ್‌ಟಾಪ್‌ಗಳ ವಾರಸುದಾರರ ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ. ಡಿಸಿಪಿ ಎಮ್. ನಾರಾಯಣ ಐಪಿಎಸ್ಅವರ ಮಾರ್ಗದರ್ಶನದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.







