ದಿನಾಂಕ:13/12/2024 ರಂದು ಕೆ.ಆರ್.ಪುರ ಪೊಲೀಸ್ ಠಾಣಾ ಸರಹದ್ದಿನ, ಟಿ.ಸಿ ಪಾಳ್ಯದಲ್ಲಿ ವಾಸವಿರುವ ಓರ್ವ ವಿದೇಶಿ ಮಹಿಳೆಯೋರ್ವಳು ಅಂಗಡಿಯೊಂದನ್ನು ಇಟ್ಟುಕೊಂಡಿದ್ದು, ವಿದೇಶಿ ಪ್ರಜೆಗಳಿಗೆ ಬೇಕಾದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದರ ಜೊತೆಗೆ, ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವುದಾಗಿ ಬಾತ್ಮೀದಾರರಿಂದ ಖಚಿತ ಮಾಹಿತಿಯೊಂದು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ದೊರೆತಿರುತ್ತದೆ.
ಈ ಮಾಹಿತಿಯನ್ನು ಆಧಾರಿಸಿ ದಿನಾಂಕ:13/12/2024 ರಂದು ಬಾತ್ಮೀದಾರರು ತಿಳಿಸಿದ ಸ್ಥಳಕ್ಕೆ ಧಾವಿಸಿ ದಾಳಿ ಮಾಡಿ, ಓರ್ವ ವಿದೇಶಿ ಮಹಿಳೆಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವಿದೇಶಿ ಮಹಿಳೆಯನ್ನು ವಿಚಾರಣೆ ಮಾಡಲಾಗಿ, ಮೋಜಿನ ಜೀವನ ನಡೆಸುವ ಸಲುವಾಗಿ ಮತ್ತು ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಗಳಿಸುವ ದುರುದ್ದೇಶದಿಂದ ಮುಂಬೈನಲ್ಲಿ ನೆಲೆಸಿರುವ ಆಫ್ರಿಕಾ ಮೂಲದ ಮಹಿಳೆಯೋರ್ವಳು ನಿಷೇದಿತ ಮಾದಕ ವಸ್ತು ಎಂ.ಡಿ.ಎಂ.ಎ ಕ್ರಿಸ್ಟಲ್‌ನ್ನು ಕಡಿಮೆ ಬೆಲೆಗೆ ತಂದು ಕೋಡುತ್ತಿದ್ದು, ಅದನ್ನು ವಿದೇಶಿ ಪ್ರಜೆಗಳಿಗೆ ಪರಿಚಿತ ಗಿರಾಕಿಗಳಿಗೆ ಕಾಲೇಜು ವಿದ್ಯಾರ್ಥಿಗಳಿಗೆ, ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡುತ್ತಾ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದಾಗಿ ತನ್ನೊಪ್ಪಿಕೊಂಡಿರುತ್ತಾಳೆ. ಹಾಗೂ ಮುಂಬೈನಿಂದ ನಿಷೇದಿತ ಮಾದಕ ವಸ್ತು ಎಂ.ಡಿ.ಎಂ.ಎ ಕ್ರಿಸ್ಟಲ್‌ನ್ನು ತಂದಿದ್ದ ವಿದೇಶಿ ಮಹಿಳೆಯೋರ್ವಳು ತಪ್ಪಿಸಿಕೊಂಡು ಹೋಗಿದ್ದು, ಆಕೆಯ ಪತ್ತೆಕಾರ್ಯ
ಮುಂದುವರೆದಿದೆ.

ವಶಕ್ಕೆ ಪಡೆದ ಆರೋಪಿತೆಯ ವಶದಿಂದ ಬಿಳಿ ಮತ್ತು ಹಳದಿ ಬಣ್ಣದ ನಿಷೇದಿತ ಮಾದಕ ವಸ್ತು 12 ಕೆಜಿ ಎಂ.ಡಿ.ಎಂ.ಎ ಕ್ರಿಸ್ಟಲ್, ಒಂದು ಮೊಬೈಲ್ ಫೋನ್, 70 ಏರ್‌ಟೇಲ್ ಸಿಮ್ ಕಾರ್ಡ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಇವುಗಳ ಮೌಲ್ಯ X 24,00,00,000/-(ಇಪ್ಪತ್ತನಾಲ್ಕು ಕೋಟಿ ರೂಪಾಯಿ).
ದಿನಾಂಕ:13/12/2024 ರಂದು ಈ ಪ್ರಕರಣದ ಆರೋಪಿತೆಯ ಹಾಗೂ ತಪ್ಪಿಸಿಕೊಂಡು ಹೋಗಿರುವ ವಿದೇಶಿಯ ಮಹಿಳೆಯ ವಿರುದ್ಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಮತ್ತು ವಿದೇಶಿಯರ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದ್ದು, ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರೆದಿದೆ.
ದಿನಾಂಕ:13/12/2024 ರಂದು ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಆರೋಪಿತೆಯನ್ನು ಕೆ.ಆರ್.ಪುರಂ ಪೊಲೀಸ್ ಠಾಣೆಯಪೊಲೀಸರು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ಸಿ.ಸಿ.ಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.






