ನಕಲಿ ಆರ್ಸಿ ಕಾರ್ಡ್, ಬ್ಯಾಂಕ್ ಎನ್ಒಸಿ ಹಾಗೂ ಸರ್ಕಾರಿ ಕಚೇರಿ ಮತ್ತು ಅಧಿಕಾರಿಗಳ ಸೀಲ್ಗಳನ್ನು ಸೃಷ್ಟಿಸಿ, ಕಾರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ವಿಲ್ಸನ್ ಗಾರ್ಡನ್ ಪೊಲೀಸರು ಭೇದಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, 10 ವಿವಿಧ ಮಾದರಿಯ ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಾಹನಗಳ ಒಟ್ಟು ಮೌಲ್ಯ ಸುಮಾರು ₹2 ಕೋಟಿ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ, ಸೆಪ್ಟೆಂಬರ್ 3ರಂದು ದೂರುದಾರರಿಗೆ ಪರಿಚಯವಿದ್ದ ಕಾರು ಡೀಲರ್ ಒಬ್ಬರು ಟಯೋಟಾ ಫಾರ್ಚುನರ್ ಕಾರು ಮಾರಾಟ ಮಾಡುವುದಾಗಿ ತಿಳಿಸಿದ್ದರು. ಕಾರಿನ ಫೋಟೋಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿ, ಮುಂಗಡ ಹಣವಾಗಿ ₹20 ಸಾವಿರವನ್ನು ಫೋನ್ಪೇ ಮೂಲಕ ಪಾವತಿಸುವಂತೆ ಸೂಚಿಸಿದ್ದರು. ಹಣ ಪಾವತಿಸಿದ ಬಳಿಕ ಕಾರು ಹಾಗೂ ಆರ್ಸಿ ಕಾರ್ಡ್ ನೀಡಲಾಗಿತ್ತು. ಆದರೆ ಆರ್ಸಿ ಕಾರ್ಡ್ ಪರಿಶೀಲಿಸಿದಾಗ ಅದು ನಕಲಿ ಎಂಬುದು ಬೆಳಕಿಗೆ ಬಂದಿತ್ತು.
ಈ ಕುರಿತು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಜಾಲವನ್ನು ಪತ್ತೆಹಚ್ಚಿದ್ದಾರೆ.
ತನಿಖೆ ವೇಳೆ ಆರೋಪಿಗಳು ನಕಲಿ ಆರ್ಸಿ ಕಾರ್ಡ್, ಬ್ಯಾಂಕ್ ಎನ್ಒಸಿ, ಸರ್ಕಾರಿ ಕಚೇರಿ ಹಾಗೂ ಅಧಿಕಾರಿಗಳ ಸೀಲ್ಗಳನ್ನು ತಯಾರಿಸಿ, ಅವುಗಳನ್ನು ಬಳಸಿ ಕಾರುಗಳನ್ನು ಮಾರಾಟ ಮಾಡುತ್ತಿದ್ದುದಾಗಿ ತಿಳಿದುಬಂದಿದೆ. ಆರೋಪಿಗಳಿಂದ ನಕಲಿ ಆರ್ಸಿ ಕಾರ್ಡ್ಗಳು, ಸೀಲ್ಗಳು, ಸ್ಟಾಂಪ್ ಪೇಪರ್ಗಳು, ಕಂಪ್ಯೂಟರ್ ಹಾಗೂ ಪ್ರಿಂಟರ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಬಿಟಿಎಸ್ ರಸ್ತೆಯ ಖಾಲಿ ಜಾಗದಲ್ಲಿ ನಿಲ್ಲಿಸಲಾಗಿದ್ದ 9 ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೂರುದಾರರ ಬಳಿಯಿದ್ದ ಟಯೋಟಾ ಫಾರ್ಚುನರ್ ಕಾರನ್ನೂ ಠಾಣೆಗೆ ತರಲಾಗಿದೆ.
ಒಟ್ಟಾರೆ ಈ ಪ್ರಕರಣದಲ್ಲಿ 10 ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನ, ಅಂದಾಜು ₹2 ಕೋಟಿ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಷ್ಟು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ.

ಈ ಕಾರ್ಯಾಚರಣೆಯನ್ನು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ. ಹಾಕೆ, ಐಪಿಎಸ್ ಹಾಗೂ ಹಲಸೂರುಗೇಟ್ ಉಪವಿಭಾಗದ ಎಸಿಪಿ ಸುದೀರ್ ಎಸ್. ಅವರ ಮಾರ್ಗದರ್ಶನದಲ್ಲಿ, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರಕಾಶ್ ಕೆ. ಹಾಗೂ ಸಿಬ್ಬಂದಿ ನಡೆಸಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.







