ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ಪೊಲೀಸರು ಈ ಮಾದಕ ವಸ್ತು ಸಾಗಾಟದ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು.
ಪೊಲೀಸರ ಮಾಹಿತಿ ಪ್ರಕಾರ ಬಿಟಿಎಂ 1ನೇ ಹಂತದ ಕೆ.ಇ.ಬಿ ಪಾರ್ಕ್ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳು ಮಾರುತಿ ಸುಜುಕಿ ಕಾರಿನಲ್ಲಿ 114 ಕೆಜಿ 115 ಗ್ರಾಂ ಗಾಂಜಾವನ್ನು ಸಾಗಿಸುತ್ತಿದ್ದರು. ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದ ಯಶಸ್ವಿ ತನಿಖೆಯನ್ನು ಸುದ್ದಿಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪೊಲೀಸರು, ಮಾದಕ ವಸ್ತು ಮಾರಾಟದ ವಿರುದ್ಧ ಪೊಲೀಸರು ಕೈಗೊಂಡ ಕ್ರಮಗಳನ್ನು ವಿವರಿಸಿದರು.
ಈ ಪ್ರಕರಣವನ್ನು ಅಂದಿನ ಆಗ್ನೇಯ ವಿಭಾಗದ ಉಪ ಪೊಲೀಸ್ ಕಮೀಷನರ್ ಶ್ರೀ. ಶ್ರೀನಾಥ್ ಮಹಾದೇವ ಜೋಷಿ, ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಮೈಕೋಲೇಔಟ್ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ.ಕರಿಬಸವನ ಗೌಡ ಅವರ ನೇತೃತ್ವದಲ್ಲಿ ಸುದ್ದೆಗುಂಟೆಪಾಳ್ಯ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ನಟರಾಜ್ ಡಿಎನ್ ಮತ್ತವರ ತಂಡ ಯಶಸ್ವಿಯಾಗಿಸಿದ್ದಾರೆ.








