ಬೆಂಗಳೂರಿನಲ್ಲಿ ನಡೆದಿದ್ದ ಬಹುಕೋಟಿ ರೂಪಾಯಿ ನಗದು ವ್ಯಾನ್ ದರೋಡೆ ಪ್ರಕರಣವನ್ನು ಪೊಲೀಸರು ಕೇವಲ 60 ಗಂಟೆಗಳೊಳಗೆ ಭೇದಿಸಿದ್ದಾರೆ.
ದಿನಾಂಕ: 19/11/2025 ರಂದು ಮಧ್ಯಾಹ್ನ, ಸುಮಾರು 7.11 ಕೋಟಿ ಹಣವನ್ನು ಸಾಗಿಸುತ್ತಿದ್ದ ಎಟಿಎಂ ನಗದು ವ್ಯಾನ್ ಅನ್ನು ಜಯನಗರ-ಡೇರಿ ಸರ್ಕಲ್ ಬಳಿ ಅಪರಿಚಿತರು RBI ನಿಯಂತ್ರಣಾಧಿಕಾರಿಗಳಂತೆ ನಟಿಸಿ ಅಪಹರಿಸಿ ದರೋಡೆ ಮಾಡಿದ್ದರು. ಕೃತ್ಯ ಎಸಗಿದವರು ಶಸ್ತ್ರ ತೋರಿಸಿ ಬೆದರಿಸಿ ಹಣದ ಪೆಟ್ಟಿಗೆಗಳನ್ನು ಕೊಂಡೊಯ್ದಿದ್ದರು.
ಈ ಪ್ರಕರಣವು ಅತ್ಯಂತ ಪೂರ್ವ ಯೋಜಿತವಾಗಿದ್ದು, ಅಪರಾಧಿಗಳು ಮೊಬೈಲ್ ಬಳಸದಿರುವುದು, ಸಿಸಿಟಿವಿ ಕಾಣದ ಪ್ರದೇಶಗಳಲ್ಲಿ ನಿಲುಗಡೆ ಮಾಡುವುದು, ಮತ್ತು ಪದೇ ಪದೇ ವಾಹನಗಳ ನಂಬರ್ ಪ್ಲೇಟ್ಗಳನ್ನು ಬದಲಾಯಿಸುವುದು ಸೇರಿದಂತೆ ಹಲವು ಸವಾಲುಗಳನ್ನು ಪೊಲೀಸರಿಗೆ ಎದುರಾಗಿತ್ತು.
ಆದಾಗ್ಯೂ, ಪೊಲೀಸರು ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಐದು ರಾಜ್ಯಗಳಲ್ಲಿ ಸುಳಿವುಗಳನ್ನು ಹಿಂಬಾಲಿಸಿ, ತೀವ್ರ ತಾಂತ್ರಿಕ ವಿಶ್ಲೇಷಣೆ ಮತ್ತು ಸಿಸಿಬಿ ತಂಡಗಳ ಸಂಯೋಜಿತ ಕಾರ್ಯದ ಮೂಲಕ, ಘಟನೆ ನಡೆದ 54 ಗಂಟೆಗಳೊಳಗೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಅಲ್ಲದೆ, ದರೋಡೆಯಾದ ಒಟ್ಟು ಮೊತ್ತದಲ್ಲಿ 5.76 ಕೋಟಿ ನಗದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೃತ್ಯದಲ್ಲಿ ಒಟ್ಟು 6 ರಿಂದ 8 ಮಂದಿಯ ತಂಡ ಭಾಗಿಯಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಪತ್ತೆಯಾಗದ ಇತರ ಆರೋಪಿಗಳ ಬಗ್ಗೆ ಮತ್ತು ಉಳಿದ ನಗದು ವಶಪಡಿಸಿಕೊಳ್ಳಲು ತನಿಖೆ ಮುಂದುವರೆದಿದೆ.









