“ಬೆಂಗಳೂರಿನ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾನವೀಯತೆಯ ಘಟನೆಯೊಂದು ನಡೆದಿದೆ. ದಾರಿ ತಪ್ಪಿ ಆತಂಕದಲ್ಲಿದ್ದ 12 ವರ್ಷದ ಬಾಲಕಿಯೊಬ್ಬಳನ್ನು ಪೀಣ್ಯಾ ಪೊಲೀಸರು ಕೇವಲ 12 ನಿಮಿಷಗಳಲ್ಲಿ ರಕ್ಷಿಸಿ, ಪೋಷಕರ ಮಡಿಲು ಸೇರಿಸುವ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ದಿನಾಂಕ 21/02/2026 ರಂದು ಬೆಳಿಗ್ಗೆ ಸುಮಾರು 9:30ರ ಸಮಯದಲ್ಲಿ, ಪೀಣ್ಯಾ ವ್ಯಾಪ್ತಿಯ ವಾಸವಿಯವರ ಮನೆಯ ಮುಂದೆ ಬಾಲಕಿಯೊಬ್ಬಳು ಒಂಟಿಯಾಗಿ ಕುಳಿತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ವಿಚಾರಿಸಿದಾಗ ಆಕೆಗೆ ಮನೆಗೆ ಹೋಗುವ ದಾರಿ ಮರೆತು ಹೋಗಿರುವುದು ತಿಳಿದುಬಂದಿದೆ. ತಕ್ಷಣ ಜಾಗೃತಗೊಂಡ ಸಾರ್ವಜನಿಕರು ‘ನಮ್ಮ-112‘ ಸಹಾಯವಾಣಿಗೆ ಕರೆ ಮಾಡಿದ್ದಾರೆ.
ಮಾಹಿತಿ ಸಿಕ್ಕ ತಕ್ಷಣ ಕಾರ್ಯಪ್ರವೃತ್ತರಾದ ಹೊಯ್ಸಳ-116ರ ಸಿಬ್ಬಂದಿ, ಎಎಸ್ಐ ಸತೀಶ್ ಕುಮಾರ್ ಮತ್ತು ಕಾನ್ಸ್ಟೇಬಲ್ ವೀರೇಶ್ ಅವರು ಕೇವಲ 12 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ್ದಾರೆ. ಬಾಲಕಿಯನ್ನು ಸಮಾಧಾನಪಡಿಸಿ, ಮಾಹಿತಿ ಸಂಗ್ರಹಿಸಿ ಠಾಣೆಗೆ ಕರೆತಂದಿದ್ದಾರೆ. ಬಳಿಕ ಪೋಷಕರನ್ನು ಸಂಪರ್ಕಿಸಿ ಬಾಲಕಿಯನ್ನು ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.
ಬೆಂಗಳೂರು ಸೇಫ್ ಸಿಟಿ (Safe City) ಯೋಜನೆಯಡಿ ಪೊಲೀಸರು ತೋರಿದ ಈ ತಕ್ಷಣದ ಕ್ರಮವು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.”









