ತಾನು ಕೆಲಸ ಮಾಡುವ ಬಿಲ್ಡರ್ಸ್ ಮತ್ತು ಮೈನಿಂಗ್ ಕಂಪನಿಯಲ್ಲೇ ಕಳವು ಮಾಡಿಸಿದ್ದ ಖತರ್ನಾಕ್ ಕಿಲಾಡಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಕೇವಲ ಒಂದು ವಾರದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕೋಟ್ಯಂತರ ರೂಪಾಯಿ ಹಣದ ಪೈಕಿ ಬಹುಪಾಲು ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ.
ಫೆಬ್ರವರಿ 19ರ ರಾತ್ರಿ ಸದಾಶಿವನಗರದ ಬಿಇಎಲ್ ರಸ್ತೆಯಲ್ಲಿರುವ ಬಿಲ್ಡರ್ಸ್ ಕಚೇರಿಯ ಗಾಜು ಒಡೆದು ಒಟ್ಟು 91,76,000/– ನಗದನ್ನು ಅಪರಿಚಿತರು ಕಳವು ಮಾಡಿದ್ದರು.ಪೊಲೀಸರು ತನಿಖೆ ಕೈಗೊಂಡು ಶಿವಮೊಗ್ಗದಲ್ಲಿ ಕಾರಿನ ಸಮೇತ ಒಬ್ಬ ಆರೋಪಿಯನ್ನು ಬಂಧಿಸಿದರು. ಆತನ ವಿಚಾರಣೆ ನಡೆಸಿದಾಗ ಅದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಈ ಕೃತ್ಯಕ್ಕೆ ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ. ಸದ್ಯ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.
ಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ತಂದೆಯ ಬಳಿ ಹಣ ಇಟ್ಟಿರುವುದಾಗಿ ಬಂಧಿತರು ಮಾಹಿತಿ ನೀಡಿದ್ದರು. ಈ ಮೇರೆಗೆ ಶಿವಮೊಗ್ಗದಲ್ಲಿ ದಾಳಿ ನಡೆಸಿದ ಪೊಲೀಸರು 81,66,000/- ನಗದನ್ನು ವಶಪಡಿಸಿಕೊಂಡಿದ್ದಾರೆ.
ಕಚೇರಿಯಲ್ಲಿ ಹೆಚ್ಚಿನ ಹಣ ಇರುವುದನ್ನು ಗಮನಿಸಿದ್ದ ಸಿಬ್ಬಂದಿ, ಸುಲಭವಾಗಿ ಹಣ ಗಳಿಸುವ ಆಸೆಯಿಂದ ತನ್ನ ಸ್ನೇಹಿತರಿಗೆ ಮಾಹಿತಿ ನೀಡಿ ಈ ಕಳವು ಮಾಡಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಕೇಂದ್ರ ವಿಭಾಗದ ಡಿಸಿಪಿ ಶ್ರೀ ಅಕ್ಷಯ್ ಎಂ ಹಾಕೆ (IPS)ಅವರ ಮಾರ್ಗದರ್ಶನದಲ್ಲಿ, ಎಸಿಪಿ ಬಿ. ರಾಮಚಂದ್ರ ಮತ್ತು ಸದಾಶಿವನಗರ ಇನ್ಸ್‌ಪೆಕ್ಟರ್ ಪ್ರದೀಪ್ ಬಿ ಅವರ ನೇತೃತ್ವದ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ.









