ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಮೂವರು ಅಂತರಜಿಲ್ಲಾ ವಂಚಕರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಒಂದು ಕಾರು ಹಾಗೂ ಅಂದಾಜು 40 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.ಕೊಪ್ಪಳ ಜಿಲ್ಲೆಯ ಹಿಟ್ನಾಳ ಗ್ರಾಮದ ವ್ಯಕ್ತಿಯೊಬ್ಬರಿಗೆ ಗಾಂಧಿನಗರದ ಪರಿಚಯಸ್ಥನೊಬ್ಬ “50 ಲಕ್ಷನೀಡಿದರೆ ಅದರ ಎರಡರಷ್ಟು ಹಣ ವಾಪಸ್ ಕೊಡಿಸುವುದಾಗಿ” ಆಮಿಷ ಒಡ್ಡಿದ್ದ. ಇದನ್ನು ನಂಬಿದ ದೂರುದಾರರು, ಕಳೆದ ಮಾರ್ಚ್ 10ರಂದು 8ನೇ ಮೈಲಿ ಬಳಿ 28.60 ಲಕ್ಷ ಹಣದೊಂದಿಗೆ ಬಂದಿದ್ದರು. ಆಗ ಕಾರಿನಲ್ಲಿ ಬಂದ ಆರೋಪಿಗಳು ಹಣವನ್ನು ಪಡೆದು ಪರಾರಿಯಾಗಿದ್ದರು. ಈ ಬಗ್ಗೆ ಮಾರ್ಚ್ 11ರಂದು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮಾರ್ಚ್ 16ರಂದು ಶೆಟ್ಟಿಹಳ್ಳಿಯ ಜುಂಜಪ್ಪ ದೇವಸ್ಥಾನದ ಬಳಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದರು. ವಿಚಾರಣೆಯ ವೇಳೆ ಆರೋಪಿಗಳು ಕೇವಲ ಈ ಒಂದು ಪ್ರಕರಣ ಮಾತ್ರವಲ್ಲದೆ, ಇದೇ ರೀತಿ ಮತ್ತೊಂದು ಪ್ರಕರಣದಲ್ಲಿ 18.50 ಲಕ್ಷವಂಚಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ವಿವಿಧೆಡೆ ದಾಳಿ ನಡೆಸಿ ಒಟ್ಟು 40,00,000 ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಯನ್ನು ವಾಯುವ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ನಾಗೇಶ್.ಡಿ.ಎಲ್. ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಚಿಕ್ಕಬಾಣಾವರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ರಮೇಶ್ ರವರ ನೇತೃತ್ವದಲ್ಲಿ, ಬಾಗಲಗುಂಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಷರಾದ ಶ್ರೀ.ಹನುಮಂತರಾಜ್.ಎಂ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಯವರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಸಾರ್ವಜನಿಕರಿಗೆ ಎಚ್ಚರಿಕೆ: ಹಣವನ್ನು ಅಲ್ಪ ಅವಧಿಯಲ್ಲಿ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸುವ ಇಂತಹ ವಂಚಕರ ಜಾಲದ ಬಗ್ಗೆ ಜಾಗರೂಕರಾಗಿರಿ ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.









