ವೃದ್ಧನ ಆರೋಗ್ಯ ವಿಚಾರಣೆ ಹಾಗೂ ಆರೈಕೆಗಾಗಿ ಕುಟುಂಬಸ್ಥರು ನೇಮಿಸಿದ್ದ ವ್ಯಕ್ತಿಯೇ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣವನ್ನು ಕ್ಯಾಂಪ್ ಪೊಲೀಸ್ ಠಾಣೆ ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಹೇಳಿದರು.
ಶುಕ್ರವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಬಂಧಿತ ಆರೋಪಿಗಳನ್ನು ರಾಹುಲ್ ಕಾಂಬಳೆ ಹಾಗೂ ಬಾಬಾಸಾಹೇಬ್ ಕಟಗೇರಿ ಎಂದು ಗುರುತಿಸಲಾಗಿದೆ. ವಿಶ್ವಾನಾಥ ಎಂಬ ಹಿರಿಯ ವೃದ್ಧರ ಆರೋಗ್ಯ ವಿಚಾರಣೆ ಮತ್ತು ಆರೈಕೆಗಾಗಿ ಅವರ ಮಕ್ಕಳಿಂದ ರಾಹುಲ್ ಕಾಂಬಳೆಯನ್ನು ನೇಮಿಸಲಾಗಿತ್ತು. ಮನೆಗೆ ನಿರಂತರವಾಗಿ ಓಡಾಡುತ್ತಿದ್ದ ರಾಹುಲ್, ಮನೆಯಲ್ಲಿದ್ದ ಚಿನ್ನಾಭರಣದ ಬಗ್ಗೆ ಮಾಹಿತಿ ಸಂಗ್ರಹಿಸಿ, ಟಿಜೋರಿಯಲ್ಲಿ ಹೆಚ್ಚಿನ ಪ್ರಮಾಣದ ಚಿನ್ನಾಭರಣ ಇರುವುದನ್ನು ಖಚಿತಪಡಿಸಿಕೊಂಡಿದ್ದಾನೆ.
ನಂತರ ಕಳೆದ ಮೂರು ತಿಂಗಳ ಅವಧಿಯಲ್ಲಿ ಯಾರಿಗೂ ಅನುಮಾನ ಬಾರದಂತೆ ಟಿಜೋರಿಯಲ್ಲಿದ್ದ ಚಿನ್ನಾಭರಣವನ್ನು ಹಂತ ಹಂತವಾಗಿ ಕಳವು ಮಾಡಿದ್ದಾನೆ. ಒಟ್ಟಾರೆ 930 ಗ್ರಾಂ ತೂಕದ, ಸುಮಾರು 73.30 ಲಕ್ಷರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕಳವು ಮಾಡಿದ ಚಿನ್ನಾಭರಣವನ್ನು ಸಹಆರೋಪಿ ಬಾಬಾಸಾಹೇಬ್ ಕಟಗೇರಿ ಮೂಲಕ ಮುತ್ತೂಟ್ ಫೈನಾನ್ಸ್ ನಲ್ಲಿ ಒತ್ತೆಯಿಟ್ಟು ಹಣ ಪಡೆದಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಕ್ಯಾಂಪ್ ಪೊಲೀಸ್ ಠಾಣೆ ಅಧಿಕಾರಿಗಳು ತಾಂತ್ರಿಕ ಮಾಹಿತಿ ಹಾಗೂ ಖಚಿತ ಸುಳಿವುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಕಳುವಾಗಿದ್ದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದ್ದು,ಸಾರ್ವಜನಿಕರು ಮನೆಯಲ್ಲಿ ಹೆಚ್ಚಿನ ಚಿನ್ನಾಭರಣ ಇಡದೆ ಸುರಕ್ಷಿತವಾಗಿ ಬ್ಯಾಂಕ್ ಲಾಕರ್ ನಲ್ಲಿ ಇಡಬೇಕು ಎಂದು ಮನವಿ ಮಾಡಿದರು.
ಪ್ರಕರಣವನ್ನು ಅಲ್ಪಾವಧಿಯಲ್ಲೇ ಭೇದಿಸಿ ಆರೋಪಿಗಳನ್ನು ಬಂಧಿಸಿರುವ ಕ್ಯಾಂಪ್ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಶ್ಲಾಘಿಸಿದರು. ಪ್ರಕರಣದ ಪತ್ತೆಗೆ ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಇಲಾಖೆಯಿಂದ ಸೂಕ್ತ ಪ್ರಶಸ್ತಿ ಹಾಗೂ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.
ಡಿಸಿಪಿಗಳಾದ ನಾರಾಯಣ ಬರಮನಿ, ನಿರಂಜನ ರಾಜೆ ಅರಸ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







