ಶಾಲೆಗಳ ಅಡುಗೆ ಕೋಣೆಗಳಿಂದ ಕಳವು ಮಾಡಲಾಗಿದ್ದ ಗ್ಯಾಸ್ ಸಿಲಿಂಡರ್ಗಳನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬೀದರ ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ 55 ಗ್ಯಾಸ್ ಸಿಲಿಂಡರ್ಗಳು ಹಾಗೂ ಒಂದು ಕಾರು ಸೇರಿದಂತೆ ಒಟ್ಟು ₹9.75 ಲಕ್ಷ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ಪ್ರದೀಪ್ ಗುಂಟಿ, ಐಪಿಎಸ್ ಅವರ ನಿರ್ದೇಶನ ಹಾಗೂ ನೇರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ-1 ಶ್ರೀ ಚಂದ್ರಕಾಂತ ಪೂಜಾರಿ ಅವರ ಮುಂದಾಳತ್ವದಲ್ಲಿ, ಭಾಲ್ಕಿ ಉಪ ವಿಭಾಗದ ಡಿಎಸ್ಪಿ ಶ್ರೀ ಬಲ್ಲಪ್ಪ ನಂದಗಾಂವಿ ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ.
ಭಾಲ್ಕಿ ಗ್ರಾಮೀಣ, ಮೇಹಕರ ಹಾಗೂ ಖಟಕ ಚಿಂಚೋಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯ ವಿವಿಧ ಶಾಲೆಗಳ ಅಡುಗೆಮನೆಗಳಿಂದ ಗ್ಯಾಸ್ ಸಿಲಿಂಡರ್ಗಳನ್ನು ಕಳವು ಮಾಡಿರುವ ಆರೋಪಿಗಳು ಅವುಗಳನ್ನು ಮಹಾರಾಷ್ಟ್ರದ ಉದಗೀರ ಕಡೆಗೆ ಸಾಗಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಬೀರಿ(ಬಿ) ಕ್ರಾಸ್ ಸಮೀಪ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದರು.
ವಿಚಾರಣೆ ವೇಳೆ ಆರೋಪಿಗಳ ಮಾಹಿತಿ ಆಧರಿಸಿ ದಾಡಗಿ ಕ್ರಾಸ್ ಸಮೀಪದ ಹೋಟೆಲ್ನಲ್ಲಿ ಪರಿಶೀಲನೆ ನಡೆಸಿದಾಗ, ವಿವಿಧ ಕಂಪನಿಗಳ 55 ಗ್ಯಾಸ್ ಸಿಲಿಂಡರ್ಗಳು ಪತ್ತೆಯಾಗಿದ್ದು, ಅವುಗಳ ಮೌಲ್ಯ ಸುಮಾರು ₹2.75 ಲಕ್ಷ ಎಂದು ಅಂದಾಜಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ₹7 ಲಕ್ಷ ಮೌಲ್ಯದ ಕಾರು ಸಹ ಜಪ್ತಿಯಾಗಿದ್ದು, ಒಟ್ಟು ₹9.75 ಲಕ್ಷ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಭಾಲ್ಕಿ ಗ್ರಾಮೀಣ ವೃತ್ತದ ಸಿಪಿಐ ಶ್ರೀ ಹನುಮರೆಡ್ಡಪ್ಪ, ಪಿಎಸ್ಐ ಶ್ರೀ ಅಶೋಕ ಪಾಟೀಲ್ ಹಾಗೂ ಪೊಲೀಸ್ ಸಿಬ್ಬಂದಿ ಭಗವಾನ್, ಗುರುನಾಥ, ಶಾಮ, ಶರಣಬಸಪ್ಪ, ಬೀರಪ್ಪ, ಉಮರ್ ಪಟೇಲ್, ಪ್ರವೀಣ, ಸಂಗಮೇಶ ಮತ್ತು ಜಗದೀಶ ಅವರು ಪ್ರಮುಖ ಪಾತ್ರವಹಿಸಿದ್ದರು.
ಅಕ್ರಮವಾಗಿ ಗ್ಯಾಸ್ ಸಿಲಿಂಡರ್ಗಳನ್ನು ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಈ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಇಲಾಖೆ ಶ್ಲಾಘಿಸಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ ಹಾಗೂ ಅಪರಾಧ ಪತ್ತೆ ಕಾರ್ಯಾಚರಣೆಗಳನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.









