ನಗರದ ಆವಲಹಳ್ಳಿ ಪೊಲೀಸರು ನಿಷೇಧಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ. ಕ್ರಿಸ್ಟಲ್ ಅನ್ನು ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿ ಪ್ರಜೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಬರೋಬ್ಬರಿ 1 ಕೋಟಿ 07 ಲಕ್ಷದ 40ಸಾವಿರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ದಿನಾಂಕ: 07/11/2025 ರಂದು ಆವಲಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಕಮ್ಮಸಂದ್ರ ಸರ್ಕಲ್‌ನಲ್ಲಿರುವ ಮನೆಯೊಂದರಲ್ಲಿ ವಿದೇಶಿ ಪ್ರಜೆಯೊಬ್ಬನು ಎಂ.ಡಿ.ಎಂ.ಎ. ಕ್ರಿಸ್ಟಲ್‌ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು.
ಮಾಹಿತಿ ಆಧಾರದ ಮೇಲೆ ತಕ್ಷಣ ದಾಳಿ ನಡೆಸಿದ ಪೊಲೀಸರು ವಿದೇಶಿ ವ್ಯಕ್ತಿಯನ್ನು ವಶಕ್ಕೆ ಪಡೆದರು. ವಿಚಾರಣೆ ವೇಳೆ, ಆರೋಪಿಯು ಕಡಿಮೆ ಬೆಲೆಗೆ ಮಾದಕ ವಸ್ತುವನ್ನು ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸರು ಆರೋಪಿಯ ವಶದಿಂದ ಒಟ್ಟು 537 ಗ್ರಾಂ ತೂಕದ ವಿವಿಧ ಬಣ್ಣದ ಎಂ.ಡಿ.ಎಂ.ಎ. ಕ್ರಿಸ್ಟಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 1,07,40,000/-ಎಂದು ಅಂದಾಜಿಸಲಾಗಿದೆ. ಈ ಕುರಿತು ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಮತ್ತು ಫಾರಿನ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ವೈಟ್‌ಫೀಲ್ಡ್ ಉಪ ಪೊಲೀಸ್ ಆಯುಕ್ತ ಶ್ರೀ ಕೆ. ಪರಶುರಾಮ್, ಐಪಿಎಸ್ ಹಾಗೂ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ ರೀನಾ ಸುವರ್ಣ ರವರ ಮಾರ್ಗದರ್ಶನದಲ್ಲಿ, ಆವಲಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ರಾಮಕೃಷ್ಣರೆಡ್ಡಿ ಮತ್ತು ತಂಡ ಈ ಮಹತ್ವದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.









