ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 429 ಗ್ರಾಂ ಚಿನ್ನಾಭರಣ ಮತ್ತು 10 ಲಕ್ಷ ನಗದು ಸೇರಿದಂತೆ ಒಟ್ಟು 52.90 ಲಕ್ಷಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಫೆಬ್ರವರಿ 16ರಂದು ಬಿ.ಇ.ಎಲ್ ಲೇಔಟ್ನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಗೆ ಪೊಲೀಸ್ ಸಮವಸ್ತ್ರ ಧರಿಸಿ ಬಂದ ವ್ಯಕ್ತಿಯೊಬ್ಬ, “ಯಲಹಂಕ ಠಾಣೆಯ ಸಬ್ ಇನ್ಸ್ಪೆಕ್ಟರ್” ಎಂದು ಪರಿಚಯಿಸಿಕೊಂಡಿದ್ದ. ಸಿಸಿಟಿವಿ ಚೆಕ್ ಮಾಡುವ ನೆಪದಲ್ಲಿ ತನ್ನ ಸಹಚರನನ್ನೂ ಮನೆಗೆ ಕರೆಸಿಕೊಂಡಿದ್ದ ಈತ, ಬಳಿಕ ಮನೆಯವರ ಕೈಕಾಲು ಕಟ್ಟಿ, ಚಾಕು ತೋರಿಸಿ ಬೆದರಿಸಿ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದ.
ಪ್ರಕರಣದ ಪ್ರಮುಖ ಆರೋಪಿ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆಯಾಗಿ ಬಂದು ಈ ಸುಲಿಗೆ ಮಾಡಿದ್ದ. ಕೃತ್ಯ ಮುಗಿಸಿ ಮತ್ತೆ ಜೈಲಿಗೆ ಮರಳಿದ್ದ ಈತನನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ.
ಆರೋಪಿ ನೀಡಿದ ಮಾಹಿತಿ ಮೇರೆಗೆ ಆತನ ಇಬ್ಬರು ಸಹಚರರನ್ನು ರಾಣೆಬೆನ್ನೂರು ಹಾಗೂ ಜೈಲಿನಿಂದಲೇ ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ ಮತ್ತು ಬೆಂಗಳೂರಿನ ಆರ್.ಆರ್. ನಗರದ ಮನೆಗಳಿಂದ ಒಟ್ಟು 429 ಗ್ರಾಂ ಚಿನ್ನ ಹಾಗೂ 10 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ವಾಯುವ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ನಾಗೇಶ್.ಡಿ.ಎಲ್. ಐ.ಪಿ.ಎಸ್. ಹಾಗೂ ಪೀಣ್ಯ ಉಪ ವಿಭಾಗದ ಎಸಿಪಿ ಶ್ರೀ. ಅಶೋಕ್.ಎಂ.ಎಸ್, ರವರ ಮಾರ್ಗದರ್ಶನದಲ್ಲಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವರಾದ ಶ್ರೀ. ಭಾಸ್ಕರ್.ಸಿ ರವರು ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿ ಮಾಡಿರುತ್ತಾರೆ.









