ಸಿಲಿಕಾನ್ ಸಿಟಿಯಲ್ಲಿ ಅಕ್ರಮವಾಗಿ ರಕ್ತ ಚಂದನ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಮಡಿವಾಳ ಪೊಲೀಸರು ಭೇದಿಸಿದ್ದಾರೆ. ಬರೋಬ್ಬರಿ 285 ಕೆಜಿ ತೂಕದ ರಕ್ತ ಚಂದನದ ತುಂಡುಗಳನ್ನು ವಶಪಡಿಸಿಕೊಳ್ಳುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ಮಾರ್ಚ್ 11ರಂದು ಮಡಿವಾಳ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಸಿಲ್ಕ್ ಬೋರ್ಡ್ ಬಸ್ ನಿಲ್ದಾಣದ ಬಳಿಯ ಅರಣ್ಯ ಸರ್ವೀಸ್ ರಸ್ತೆಯಲ್ಲಿ ವ್ಯಕ್ತಿಯೊಬ್ಬ ರಕ್ತ ಚಂದನ ಮಾರಾಟ ಮಾಡಲು ಯತ್ನಿಸುತ್ತಿರುವ ಖಚಿತ ಮಾಹಿತಿ ದೊರೆತಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯಿಂದ ಪ್ರಾಥಮಿಕವಾಗಿ 10 ಕೆಜಿ ತೂಕದ 3 ರಕ್ತ ಚಂದನದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಕೆ.ಎಫ್ ಆಕ್ಟ್ (Karnataka Forest Act) ಮತ್ತು ಕಳವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಮಾರ್ಚ್ 12ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಆರೋಪಿಯನ್ನು 14 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು.ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿಯಂತೆ, ಆನೆಕಲ್ ತಾಲ್ಲೂಕಿನ ಶ್ಯಾನುಭೋಗನಹಳ್ಳಿಯ ಖಾಲಿ ಜಾಗದಲ್ಲಿ ಅಡಗಿಸಿಟ್ಟಿದ್ದ ಮತ್ತಷ್ಟು ರಕ್ತ ಚಂದನ ಪತ್ತೆಯಾಗಿದೆ. ಅಲ್ಲಿಂದ 275 ಕೆಜಿ ತೂಕದ 13 ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ದಂಧೆಯಲ್ಲಿ ಭಾಗಿಯಾಗಿರುವ ಇತರ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯು ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್ ಸುಜೀತ ಎಂ.ಎಸ್. ಮತ್ತು ಮಡಿವಾಳ ಎಸಿಪಿ ವಾಸುದೇವ್ ವಿ.ಕೆ. ಅವರ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್ ಮೊಹಮ್ಮದ್ ಎಂ.ಎ. , ಸಬ್ ಇನ್ಸ್‌ಪೆಕ್ಟರ್ ರಮೇಶ್ ಹುಗಾರ್ ಮತ್ತು ತಂಡದಿಂದ ನಡೆಸಲ್ಪಟ್ಟಿದೆ.










