ನಕಲಿ ಕೀಗಳನ್ನು ಬಳಸಿ ದ್ವಿ-ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಹದೇವಪುರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ 37.50 ಲಕ್ಷ ರೂಪಾಯಿ ಮೌಲ್ಯದ ಒಟ್ಟು 20 ದ್ವಿ-ಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.ಈ ಪ್ರಕರಣದ ತನಿಖೆಯು ಮಹದೇವಪುರ ಠಾಣೆಯಲ್ಲಿ ಅಕ್ಟೋಬರ್ 17, 2025 ರಂದು ದಾಖಲಾದ ದ್ವಿ-ಚಕ್ರ ವಾಹನ ಕಳವು ದೂರಿನಿಂದ ಆರಂಭವಾಗಿತ್ತು.ಪೊಲೀಸರು ನವೆಂಬರ್ 4 ರಂದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಅವರಿಂದ ಕಳವು ಮಾಡಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವು ವಾಹನಗಳನ್ನು ಆರೋಪಿಗಳು ಶಿಕಾರಿಪುರ, ಕಾಡುಗೋಡಿ ಮತ್ತು ಹರಿಹರದಲ್ಲಿರುವ ಸ್ನೇಹಿತರಿಗೆ ಮಾರಾಟ ಮಾಡಿದ್ದರು.
ಈ ಬಂಧನದಿಂದ ಮಹದೇವಪುರ, ಹೆಚ್.ಎ.ಎಲ್, ವೈಟ್‌ಫೀಲ್ಡ್ ಮತ್ತು ರಾಮಮೂರ್ತಿ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಒಟ್ಟು 11 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ.
ಉಪ ಪೊಲೀಸ್ ಆಯುಕ್ತರಾದ ಶ್ರೀ ಕೆ. ಪರಶುರಾಮ್, ಐಪಿಎಸ್ಮತ್ತು ಸಹಾಯಕ ಪೊಲೀಸ್ ಕಮಿಷನರ್ ಶ್ರೀಮತಿ ರೀನಾ ಸುವರ್ಣ ರವರ ಮಾರ್ಗದರ್ಶನದಲ್ಲಿ, ಮಹದೇವಪುರ ಠಾಣೆಯ ಇನ್ಸ್‌ಪೆಕ್ಟರ್ ಶ್ರೀ ಜಿ. ಪ್ರವೀಣ್ ಬಾಬು ನೇತೃತ್ವದ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.

ಆರೋಪಿಗಳನ್ನು ನವೆಂಬರ್ 12 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.







