ಬೆಂಗಳೂರು ನಗರದಾದ್ಯಂತ ದ್ವಿ-ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಬಂಡೇಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಒಟ್ಟು 18 ದ್ವಿ-ಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಅಂದಾಜು ಮೌಲ್ಯ 15 ಲಕ್ಷ ರೂಪಾಯಿಗಳು.
ಮೊದಲ ಪ್ರಕರಣದಲ್ಲಿ, ನವೆಂಬರ್ 14 ರಂದು ಹೊಸೂರು ರಸ್ತೆಯ ಬಳಿ ಕಳುವಾದ ವಾಹನ ಸಮೇತ ಓರ್ವ ವ್ಯಕ್ತಿಯನ್ನು ಬಂಧಿಸಿ, ಆತನಿಂದ 8 ದ್ವಿ-ಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಯಿತು.

ಎರಡನೇ ಪ್ರಕರಣದಲ್ಲಿ, ನವೆಂಬರ್ 15 ರಂದು ಕೂಡ್ಲು ಜಂಕ್ಷನ್ ಬಳಿ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 10 ದ್ವಿ-ಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಮೂವರು ಆರೋಪಿಗಳ ಬಂಧನದಿಂದ ಬಂಡೇಪಾಳ್ಯ ಸೇರಿದಂತೆ ಎಲೆಕ್ಟ್ರಾನಿಕ್ ಸಿಟಿ, ಪರಪ್ಪನ ಅಗ್ರಹಾರ, ವಿವೇಕ್‌ನಗರ, ಇಂದಿರಾನಗರ, ಕೆ.ಎಸ್.ಲೇಔಟ್, ಬಾಗಲಗುಂಟೆ, ಗಿರಿನಗರ, ರಾಜಗೋಪಾಲ ನಗರ ಮತ್ತು ಹೆಣ್ಣೂರು ಪೊಲೀಸ್ ಠಾಣೆಗಳ ವ್ಯಾಪ್ತಿಯ ಒಟ್ಟು 13 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರಾದ ಶ್ರೀ ನಾರಾಯಣ.ಎಂ, ಐಪಿಎಸ್ ಮತ್ತು ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಸತೀಶ್, ಕೆ.ಎಂ. ರವರ ಮಾರ್ಗದರ್ಶನದಲ್ಲಿ, ಬಂಡೇಪಾಳ್ಯ ಠಾಣೆಯ ಇನ್ಸ್‌ಪೆಕ್ಟರ್ ಶ್ರೀ ಮಹೇಶ್ ಕನಕಗಿರಿ ನೇತೃತ್ವದ ತಂಡವು ನಡೆಸಿದೆ.
ಸದ್ಯ ಉಳಿದ 5 ವಾಹನಗಳ ವಾರಸುದಾರರ ಪತ್ತೆ ಕಾರ್ಯ ಮುಂದುವರೆದಿದೆ ಮತ್ತು ತನಿಖೆ ಪ್ರಗತಿಯಲ್ಲಿದೆ.









