ರೈತ ದೇಶದ ಬೆನ್ನೆಲುಬು. ರೈತರಿಂದ ನಾವು ಪ್ರತಿನಿತ್ಯ ಅನ್ನವನುಂಡು ಜೀವನವನ್ನು ಸಾಗಿಸುತ್ತಿದ್ದೇವೆ. ಇಂತಹ ರೈತರಿಗೆ ಅನ್ಯಾಯವಾಗಲು ಬಿಡುತ್ತಾರೆಯೇ ನಮ್ಮ ಪೊಲೀಸರು…. ಅನ್ನ ಹಾಕುವ ರೈತರಿಗೆ ಕನ್ನ ಹಾಕಲು ಯತ್ನಿಸಿದ್ದ ಖದೀಮನನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆಯ ಆರಕ್ಷಕರು ಬಂಧಿಸಿದ್ದಾರೆ.
ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಾರುತಿನಗರ, ಕೊಲಶಿರ್ಶಿ ಗ್ರಾಮದ ನಾಗರಾಜ ಗೌಡರ ಅಡಿಕೆ ಬೆಳೆಯ ಕೊನೆಯ ಕೊಯ್ಲಿಗಿಂತ ಮೊದಲು ಶೇಖರಿಸಿದ್ದ ಗೋಟು ಅಡಿಕೆಯನ್ನು ಒಣಗಿಸಿ ಒಟ್ಟು ಆರು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಇಡಲಾಗಿತ್ತು. ಬೆಳಗ್ಗೆಯಾಗುವಷ್ಟರಲ್ಲಿ ಮನೆಯ ಅಂಗಳದಿಂದ ಒಣಗಿದ ಸಿಪ್ಪೆಗೋಟಿನ ಆರು ಅಡಿಕೆ ಚೀಲಗಳ ಪೈಕಿ 3 ಒಣ ಸಿಪ್ಪೆಗೋಟಿನ ಅಡಿಕೆ ಚೀಲವನ್ನು ಕಳ್ಳರು ಕದ್ದಿದ್ದರು. ಇದರ ತೂಕ ತಲಾ 15 ಕೆಜಿಯಂತೆ 45 ಕೆಜಿಯಿದ್ದು, ಅಂದಾಜು ಬೆಲೆ ರೂ.10,000ವಾಗಿತ್ತು.
ಈ ಪ್ರಕರಣದ ಪತ್ತೆಯಲ್ಲಿ ಶ್ರೀ ಎಂ ನಾರಾಯಣ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ. ಶ್ರೀ ಜಗದೀಶ್ ನಾಯ್ಕ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ. ಶ್ರೀ ಗಣೇಶ ಕೆ.ಎಲ್, ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿರಸಿ ಉಪವಿಭಾಗ ಶಿರಸಿ ಇವರುಗಳ ಮಾರ್ಗದರ್ಶನದಲ್ಲಿ ಶ್ರೀ ಜೆ.ಬಿ ಸೀತಾರಾಮ ಪೊಲೀಸ್ ನಿರೀಕ್ಷಕರು ಸಿದ್ದಾಪುರ ಪೊಲೀಸ್ ಠಾಣೆ. ಶ್ರೀ ಅನಿಲ ಬಿ.ಎಮ್ ಪಿಎಸ್ಐ ಸಿದ್ದಾಪುರ ಪೊಲೀಸ್ ಠಾಣೆ. ಶ್ರೀಮತಿ ಗೀತಾ ಶಿರ್ಶಿಕರ, ಪಿಎಸ್ಐ ಸಿದ್ದಾಪುರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳಾದ ರಮೇಶ್ ಕೂಡಲ್, ರಾಜು ಎಂ ಶ್ರೀಶೈಲ್ ಉಪ್ಪಾರಟ್ಟಿ, ಮಣಿಕಂಠ ಎಂಆರ್ ರವರು ಸೇರಿಕೊಂಡು ಕಳ್ಳತನ ಮಾಡಿದಂತಹ ಸುಮಾರು 34 ವರ್ಷದ ಕೂಲಿ ಕೆಲಸಗಾರ ಕಾಶಿನಾಥ್ನನ್ನು ವಶಕ್ಕೆ ಪಡೆದಿದ್ದಾರೆ.
ಕಳ್ಳ ಕಾಶೀನಾಥನಿಂದ ಒಟ್ಟಾರೆಯಾಗಿ ಹಲವು ಕಳ್ಳತನದಿಂದ 25,000ರೂ. ಮೌಲ್ಯದ 8ಅಡಿಕೆ ಚೀಲ ಮತ್ತು ಕೃತ್ಯಕ್ಕೆ ಬಳಸಿದ, ಅಂದಾಜು 35,000ರೂ. ಮೌಲ್ಯದ ಮೋಟಾರ್ ಸೈಕಲ್ ಜಪ್ತಿ ಮಾಡಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್









