ದಿನಾಂಕ: 09-06-2024 ರಂದು 7ನೇ ಬ್ಲಾಕ್ ಜಯನಗರ ವಾಸಿಗಳು ಮನೆಗೆ ಬೀಗ ಹಾಕಿ, ಕೀಯನ್ನು ಪಕ್ಕದ ಮನೆಯವರಿಗೆ ನೀಡಿ ಕುಟುಂಬದವರೊಂದಿಗೆ ಊರಿಗೆ ಹೋಗಿರುತ್ತಾರೆ. ನಂತರ ದಿನಾಂಕ: 12-06-2024 ರಂದು ರಾತ್ರಿ ಮನೆಗೆ ವಾಪಸ್ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಕೊಠಡಿಯಲ್ಲಿದ್ದ ಬೀರುವಿನ ಬೀಗವನ್ನು ಹೊಡೆದು ಬೀರುವಿನಲ್ಲಿದ್ದ 80,000/-ಮೌಲ್ಯದ 10 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಈ ಕುರಿತು ಜಯನಗರ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿರುತ್ತಾರೆ ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ಮನೆಯ ಮುಂಬಾಗಿಲಿನ ಬೀಗಕ್ಕೆ ಯಾವುದೇ ಹಾನಿ ಉಂಟಾಗದ ಕಾರಣ ಮನೆಯ ಕೀಯನ್ನು ಪಕ್ಕದ ಮನೆಯವರ ಬಳಿ ಇದ್ದುದ್ದರಿಂದ ಅವರ ಮೇಲೆ ಅನುಮಾನಗೊಂಡು, ದಿನಾಂಕ: 14/06/2024 ರಂದು ವಿಚಾರಣೆ ಕರೆತಂದಿರುತ್ತಾರೆ. ವಿಚಾರಣೆ ವೇಳೆಯಲ್ಲಿ ಪಕ್ಕದ ಮನೆಯ ವ್ಯಕ್ತಿಯು ತಾನೇ ಚಿನ್ನದ ಸರವನ್ನು ಕಳುವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ ಹಾಗೂ ಕಳುವಾದ ಚಿನ್ನದ ಸರವನ್ನು ಹಾಜರುಪಡಿಸಿರುತ್ತಾನೆ.
ಈ ಚಿನ್ನದ ಸರವು 10 ಗ್ರಾಂ ತೂಕವಿದ್ದು, ಮೌಲ್ಯ 80,000/-ಗಳಾಗಿರುತ್ತದೆ. ಆರೋಪಿಯನ್ನು ದಿನಾಂಕ: 15-06-2024 ರಂದು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿರುತ್ತದೆ. ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ನಾರಾಯಣಸ್ವಾಮಿ,ವಿ ರವರ ನೇತೃತ್ವದಲ್ಲಿ, ಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ದೀಪಕ್.ಆರ್ ಹಾಗೂ ಅಧಿಕಾರಿ/ಸಿಬ್ಬಂದಿಯವರು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









