08 ದ್ವಿ-ಚಕ್ರ ವಾಹನ ಮತ್ತು 02-ಆಟೋರಿಕ್ಷಾಗಳ ವಶ, ಮೌಲ್ಯ 13 ಲಕ್ಷ.
ಬೊಮ್ಮನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ದೇವರ ಚಿಕ್ಕನಹಳ್ಳಿಯಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:14/12/2024 ರಂದು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ: 13/12/2024 ರಂದು ಮಡಿವಾಳದ ಡಾಲರ್ ಕಾಲೋನಿಯಲ್ಲಿರುವ ಪಿರಾದುದಾರರ ಸ್ನೇಹಿತನ ಮನೆಯ ಮುಂದೆ ದ್ವಿ- ಚಕ್ರ ವಾಹನವನ್ನು ನಿಲ್ಲಿಸಿ, ಸ್ನೇಹಿತನ ಮನೆಗೆ ಹೋಗಿರುತ್ತಾರೆ. ದಿನಾಂಕ:14/12/2024 ರಂದು ಮದ್ಯಾಹ್ನ ವಾಪಸ್ ಬಂದು ನೋಡಲಾಗಿ, ಪಿರಾದುದಾರರ ದ್ವಿ-ಚಕ್ರ ವಾಹನವನ್ನು ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಮಡಿವಾಳ ಪೊಲೀಸ್ ಠಾಣೆಯಲ್ಲಿ ದ್ವಿ-ಚಕ್ರ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ.

ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಭಾತ್ಮೀದಾರರಿಂದ ಮಾಹಿತಿಯನ್ನು ಕಲೆಹಾಕಿ, ದಿನಾಂಕ:27/12/2024 ರಂದು ಕೋರಮಂಗಲದ ವಾಟರ್ ಟ್ಯಾಂಕ್ ಸಿಗ್ನಲ್ ಬಳಿ ಓರ್ವ ವ್ಯಕ್ತಿಯನ್ನು ಪ್ರಕರಣದಲ್ಲಿ ಕಳುವಾಗಿದ್ದ ದ್ವಿ-ಚಕ್ರ ವಾಹನ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ, ಈ ಪ್ರಕರಣದಲ್ಲಿ ದ್ವಿ-ಚಕ್ರ ವಾಹನವನ್ನು ಕಳ್ಳತನ ಮಾಡಿರುವುದಾಗಿ ತಪ್ಪಿಪ್ಪಿಕೊಂಡಿರುತ್ತಾನೆ. ಹಾಗೂ ಇಬ್ಬರು ಸಹಚರರೊಂದಿಗೆ ಸೇರಿಕೊಂಡು ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿಯೂ ದ್ವಿ-ಚಕ್ರ ವಾಹನ ಮತ್ತು ಆಟೋ ರಿಕ್ಷಾವನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:28/12/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 4 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆ ಮಾಡಿ, ಆರೋಪಿಯು ನೀಡಿದ ಮಾಹಿತಿಯ ಮೇರೆಗೆ, ದಿನಾಂಕ:30/12/2024 ರಂದು ಮಡಿವಾಳದ ಸಿಲ್ಕ್ಬೋರ್ಡ್ ಬಳಿ ಇರುವ ದರ್ಗಾದ ಪಕ್ಕದ ರಸ್ತೆಯಲ್ಲಿ ಕಳವು ಮಾಡಿ ನಿಲ್ಲಿಸಿದ್ದ 05 ದ್ವಿ-ಚಕ್ರ ವಾಹನಗಳನ್ನು ಮತ್ತು 01 ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಯಿತು.
ದಿನಾಂಕ:30/12/2024 ರಂದು ಮಡಿವಾಳ ಮಾರುಕಟ್ಟೆ ರಸ್ತೆಯ ಪಕ್ಕದಲ್ಲಿ ಕಳವು ಮಾಡಿ ನಿಲ್ಲಿಸಿದ್ದ 02 ದ್ವಿ- ಚಕ್ರ ವಾಹನಗಳನ್ನು ಮತ್ತು 01 ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಯಿತು.

ಈ ಪ್ರಕರಣದ ಆರೋಪಿಯ ಬಂಧನದಿಂದ ಒಟ್ಟಾರೆ 08-ದ್ವಿ-ಚಕ್ರ ವಾಹನಗಳು ಮತ್ತು 02-ಆಟೋ ರಿಕ್ಷಾಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 13,00,000/-(ಹದಿಮೂರು ಲಕ್ಷ ರೂಪಾಯಿ).
ಈ ಪ್ರಕರಣದ ಆರೋಪಿಯ ಬಂಧನದಿಂದ ಮಡಿವಾಳ ಪೊಲೀಸ್ ಠಾಣೆಯ 02 ದ್ವಿ-ಚಕ್ರ ವಾಹನ ಮತ್ತು 02 ಆಟೋರಿಕ್ಷಾ ಕಳವು ಪ್ರಕರಣಗಳು ಪತ್ತೆಯಾಗಿರುತ್ತದೆ. ಉಳಿದ 06 ದ್ವಿ-ಚಕ್ರ ವಾಹನಗಳ ಮಾಲೀಕರು ಹಾಗೂ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಪತ್ತೆಯಾಗಬೇಕಾಗಿದ್ದು, ತನಿಖೆ ಮುಂದುವರೆದಿದೆ.
ದಿನಾಂಕ:31/12/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.

ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ, ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ ಸಾರಾ ಫಾತಿಮಾ, ಐ.ಪಿ.ಎಸ್ ರವರು ಮತ್ತು ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಲಕ್ಷ್ಮೀನಾರಾಯಣ ಕೆ.ಸಿ. ರವರುಗಳ ಮಾರ್ಗದರ್ಶನದಲ್ಲಿ, ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಮೊಹಮ್ಮದ್ ಎಂ.ಎ. ರವರ ಅಧಿಕಾರಿ ಸಬ್ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಹಾಗೂ ಸಿಬ್ಬಂದಿಗಳ ತಂಡ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.









