ನಗರದಲ್ಲಿ ಸರಣಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಆರೋಪಿಗಳನ್ನು ಶ್ರೀರಾಮಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 2.9 ಲಕ್ಷ ರೂಪಾಯಿ ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.ಕಳೆದ ಏಪ್ರಿಲ್ 14ರಂದು ರಾಮಚಂದ್ರಪುರದ ನಿವಾಸಿಯೊಬ್ಬರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ನಾಪತ್ತೆಯಾದ ಬಗ್ಗೆ ಏಪ್ರಿಲ್ 28ರಂದು ಶ್ರೀರಾಮಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.
ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸ್ ತಂಡಕ್ಕೆ ಲಭಿಸಿದ ಖಚಿತ ಮಾಹಿತಿ ಮೇರೆಗೆ, ಮೇ 02 ರಂದು ತಮಿಳುನಾಡಿನ ರೋಸಾ ಕೋಸ್ಟ್‌ನಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ವಿಚಾರಣೆಯ ವೇಳೆ ಆರೋಪಿಗಳು ಶ್ರೀರಾಮಪುರ ಮಾತ್ರವಲ್ಲದೆ, ಬೆಂಗಳೂರಿನ ವಿವಿಧ ಭಾಗಗಳಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.ಸಂಜಯ್ ಗಾಂಧಿನಗರದ ಬ್ರಿಟಾನಿಯಾ ಫ್ಯಾಕ್ಟರಿ ಬಳಿ, ಆರ್.ಜಿ. ಹೈಸ್ಕೂಲ್ ಆವರಣ ಹಾಗೂ ತಮಿಳುನಾಡಿನ ಮಾದನೂರಿನ ಹೈವೇ ಪಕ್ಕದ ಕಟ್ಟಡವೊಂದರಲ್ಲಿ ಬೈಕ್‌ಗಳನ್ನು ಅಡಗಿಸಿಡಲಾಗಿತ್ತು.
“ಆರೋಪಿಗಳನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ಸುದೀರ್ಘ ವಿಚಾರಣೆ ನಡೆಸಿದಾಗ ಈ ಬೃಹತ್ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.”
ಉತ್ತರ ವಿಭಾಗದ ಡಿಸಿಪಿ ಶ್ರೀ ಬಿ.ಎಸ್. ನೇಮಗೌಡ (IPS) ಅವರ ಮಾರ್ಗದರ್ಶನದಲ್ಲಿ, ಮಲ್ಲೇಶ್ವರಂ ಎಸಿಪಿ ಶ್ರೀ ವೇಣುಗೋಪಾಲ್ ಬಿ.ಆರ್. ಅವರ ನೇತೃತ್ವದಲ್ಲಿ ಶ್ರೀರಾಮಪುರ ಇನ್ಸ್‌ಪೆಕ್ಟರ್ ಶ್ರೀ ಪೂಣಚ್ಚ ಎನ್.ಎಂ. ಹಾಗೂ ಸಿಬ್ಬಂದಿಗಳ ತಂಡ ಈ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿದೆ.
ಸದ್ಯ ಶ್ರೀರಾಮಪುರ ಠಾಣೆಯ ಒಂದು ಪ್ರಕರಣ ಪತ್ತೆಯಾಗಿದ್ದು, ಉಳಿದ 9 ವಾಹನಗಳ ವಾರಸುದಾರರನ್ನು ಪತ್ತೆಹಚ್ಚುವ ಕೆಲಸ ಪ್ರಗತಿಯಲ್ಲಿದೆ.









