500 ಗ್ರಾಂ ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿ ಮತ್ತು 5 ಲಕ್ಷ ನಗದು ವಶ. ಮೌಲ್ಯ 50 ಲಕ್ಷ.
ಹಲಸೂರುಗೇಟ್ ಪೊಲೀಸ್ ಠಾಣಾ ಸರಹದ್ದಿನ ನಗರತ್ ಪೇಟೆಯಲ್ಲಿ ಜ್ಯೂವೆಲರಿ ಅಂಗಡಿಯನ್ನು ಹೊಂದಿರುವ ಪಿರಾದುದಾರರು ದಿನಾಂಕ:12/01/2025 ರಂದು ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರ ಜ್ಯೂವೆಲರಿ ಅಂಗಡಿಯಲ್ಲಿ ಓರ್ವ ವ್ಯಕ್ತಿಯು ಮೂರು ವರ್ಷದಿಂದ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿರುತ್ತಾನೆ. ಆ ವ್ಯಕ್ತಿಯು ಪಿರಾದುದಾರರ ಜ್ಯೂವೆಲರಿ ಅಂಗಡಿಯಿಂದ ಚಿನ್ನಾಭರಣಗಳನ್ನು ಬೆಂಗಳೂರು ನಗರದಲ್ಲಿರುವ ವಿವಿಧ ಜ್ಯೂವೆಲರಿ ಅಂಗಡಿಗಳಿಗೆ ಸೇಲ್ಸ್ ಮಾಡಿ ಬರುವುದಾಗಿ ಪಿರಾದುದಾರರ ಜ್ಯೂವೆಲರಿ ಅಂಗಡಿಯಿಂದ ಪಿರಾದುದಾರರಿಗೆ ಹಾಗೂ ಪಿರಾದುದಾರರ ಸ್ನೇಹಿತನಿಗೆ ಸಂಬಂಧಪಟ್ಟ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿ ಸೇಲ್ಸ್ ಮಾಡದೇ, ಚಿನ್ನಾಭರಣಗಳನ್ನು ಜ್ಯೂವೆಲರಿ ಅಂಗಡಿಗೆ ವಾಪಸ್ ತಂದು ಕೊಡದೇ ನಂಬಿಕೆ ದ್ರೋಹವೆಸಗಿ, ಮೋಸ ಮಾಡಿರುತ್ತಾನೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:20/01/2025 ರಂದು ಲಕ್ಷ್ಮೀ ಸಿಟಿಯಲ್ಲಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿ ವಂಚಿಸಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ.
ದಿನಾಂಕ:21/01/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ವಂಚಿಸಿ ತೆಗೆದುಕೊಂಡು ಹೋಗಿದ್ದ ಚಿನ್ನಾಭರಣಗಳನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ವಿವಿಧ ಜ್ಯೂವೆಲರಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ. ಹಾಗೂ ಚಿನ್ನಾಭರಣಗಳನ್ನು ಮಾರಾಟ ಮಾಡಿ ಬಂದ ಕೆ 5 ಲಕ್ಷ ನಗದನ್ನು ಆತನಿಗೆ ಪರಿಚಯವಿರುವ ಜ್ಯೂವೆಲರಿ ಅಂಗಡಿಯೊಂದರಲ್ಲಿ ಇರಿಸಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:23/01/2025 ಮತ್ತು 24/01/2025 ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ವಿವಿಧ ಜ್ಯೂವೆಲರಿ ಅಂಗಡಿಗಳಲ್ಲಿ ಮಾರಾಟ ಮಾಡಿದ್ದ 500 ಗ್ರಾಂ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 50,00,000/-(ಐವತ್ತು ಲಕ್ಷ ರೂಪಾಯಿ).
ದಿನಾಂಕ:30/01/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು ಕೇಂದ್ರ ವಿಭಾಗ ರವರಾದ ಶ್ರೀ. ಶೇಖರ್ ಸಿ. ಐ.ಪಿ.ಎಸ್ ಮತ್ತು ಎ.ಸಿ.ಪಿ ಹಲಸೂರು ಗೇಟ್ ಶ್ರೀ.ಶಿವಾನಂದ ಚಲವಾದಿ ರವರ ಮಾರ್ಗದರ್ಶನದಲ್ಲಿ ಹಲಸೂರುಗೇಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ಹನಮಂತ ಕೆ ಭಜಂತ್ರಿ ರವರ ಅಧಿಕಾರಿ/ಸಿಬ್ಬಂದಿಯವರ ತಂಡ ಪ್ರಕರಣವನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.










