ಕರ್ನಾಟಕದಲ್ಲಿ ಕಿಚ್ಚು ಹಚ್ಚಿದ್ದಂತಹ ಕಾನೂನು ಪದವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಇದೀಗ ಮಹತ್ವದ ಬೆಳವಣಿಗೆ ಕಂಡಿದೆ. ಪ್ರಕರಣದ ಜಾಲವನ್ನು ಪತ್ತೆ ಮಾಡಿದ ಪೊಲೀಸರು,ಮೂವರು ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ 3 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಬಂಧನದಲ್ಲಿದ್ದು ವಿಚಾರಣೆ ಮುಂದುವರೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಸದ್ಯಕ್ಕೆ ಪೊಲೀಸ್ ಅಭಿರಕ್ಷೆಯಲ್ಲಿರುವ ಇಬ್ಬರು ಆರೋಪಿಗಳ ಪೈಕಿ ಒಬ್ಬ, ಕೋಲಾರದ ಬಸವಶ್ರೀ ಕಾನೂನು ವಿದ್ಯಾಲಯದ ವಿದ್ಯಾರ್ಥಿಯಾಗಿದ್ದು ಹಾಗೂ ಉಪ ಪ್ರಾಂಶುಪಾಲರ ಕಾರು ಚಾಲಕನಾಗಿದ್ದನು. ಉಪ ಪ್ರಾಂಶುಪಾಲರ ಮೊಬೈಲ್ ನಲ್ಲಿ ಬಂದಂತಹ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳನ್ನು ತನ್ನ ಮೊಬೈಲ್ಗೆ ರವಾನಿಸಿಕೊಂಡು, ವಾಟ್ಸಪ್ ಮೂಲಕ ಹಂಚಿದ್ದಾನೆ. ಇನ್ನೊಬ್ಬ ಆರೋಪಿಯು ಬಂಗಾರಪೇಟೆ, ಕೋಲಾರದಲ್ಲಿರುವ ಕಾನೂನು ವಿದ್ಯಾಲಯದ ಪ್ರಶ್ನೆ ಪತ್ರಿಕೆಯನ್ನು ಹಿಂದಿನ ದಿನವೇ ಯಾರಿಗೂ ತಿಳಿಯದಂತೆ ತೆರೆದಿದ್ದನು. ಅವುಗಳನ್ನು ಮೊಬೈಲ್ನಲ್ಲಿ ನಕಲುಗೊಳಿಸಿಕೊಂಡು ಹಂಚಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಇವುಗಳನ್ನು ಅಕ್ರಮವಾಗಿ ಮಾರಾಟ ಮಾಡಿ, ಹಣ ಸಂಪಾದಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿದುಬಂದಿದೆ. ಹೆಚ್ಚಿನ ವಿಚಾರಣೆಯು ಪ್ರಗತಿಯಲ್ಲಿದೆ.
ನ್ಯಾಯಾಂಗ ಬಂಧನದಲ್ಲಿರುವ ಆನೇಕಲ್ ನ ಆರೋಪಿಯು ಕೆ.ಎಸ್.ಎಲ್.ಯು ಮತ್ತು ಕೆ.ಎಸ್.ಎಲ್.ಯು ನೋಟ್ಸ್ ಎಂಬ ಟೆಲಿಗ್ರಾಂ ಗ್ರೂಪುಗಳಲ್ಲಿ ಕರಾರು ಕಾನೂನು - 1, ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ್ದಾರೆ.ಹೆಚ್ಚಿನ ವಿಚಾರಣೆಗಳು ಪ್ರಗತಿಯಲ್ಲಿದ್ದು, ಬೆಂಗಳೂರು ನಗರ ಅಪರಾಧ ವಿಭಾಗದ ಉಪ ಪೋಲೀಸ್ ಆಯುಕ್ತರಾದ ಶ್ರೀ.ಅಕ್ಷಯ ಎಂ ಹಾಕೆ,ಐಪಿಎಸ್ ಇವರ ನೇತೃತ್ವದಲ್ಲಿ ಪೊಲೀಸ್ ಸೈಬರ್ ಕ್ರೈಂ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಗಳಾದ ಶ್ರೀ.ಹಜರೇಶ್ ಕಿಲ್ಲೇದಾರ್ ಮತ್ತು ಶ್ರೀ.ವರುಣ್ ಕುಮಾರ್ ರವರ ಸಿಬ್ಬಂದಿಗಳ ತಂಡ ಈ ಪ್ರಕರಣದ ಜಾಲವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್









