ಬೆಂಗಳೂರು ನಗರದಲ್ಲಿ ದ್ವಿ-ಚಕ್ರ ವಾಹನಗಳ ಕಳವು ಮಾಡುತ್ತಿದ್ದ ಹೊರ ರಾಜ್ಯದ ಓರ್ವ ಆರೋಪಿಯನ್ನು ಆಡುಗೋಡಿ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಬರೋಬ್ಬರಿ 42 ರಾಯಲ್ ಎನ್ಫೀಲ್ಡ್ ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ ಒಂದು ಕೋಟಿ ರೂಪಾಯಿಗಳು ( 1,00,00,000/-) ಎಂದು ಅಂದಾಜಿಸಲಾಗಿದೆ.
ದಿನಾಂಕ: 25/03/2023 ರಂದು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ಕಾರ್ಯಚರಣೆ ನಡೆಸಿ, ದಿನಾಂಕ: 16/10/2025 ರಂದು ತಮಿಳುನಾಡಿನ ಎಂ.ಜಿ.ಆರ್. ನಗರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ, ಈ ವ್ಯಕ್ತಿಯು ಬೆಂಗಳೂರಿನ ವಿವಿಧೆಡೆ ರಾಯಲ್ ಎನ್ಫೀಲ್ಡ್ ಬೈಕ್ಗಳನ್ನು ಕಳವು ಮಾಡಿ, ಅವುಗಳನ್ನು ತಮಿಳುನಾಡಿನಲ್ಲಿರುವ ಸ್ನೇಹಿತರು ಮತ್ತು ಸಂಬಂಧಿಕರಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸ್ ಕಸ್ಟಡಿಯಲ್ಲಿ ಮತ್ತಷ್ಟು ವಿಚಾರಣೆ ನಡೆಸಿದ ನಂತರ, ದಿನಾಂಕ: 17/10/2025 ರಿಂದ 07/11/2025 ರ ಅವಧಿಯಲ್ಲಿ ಪೊಲೀಸರು ಆರೋಪಿಯ ಸ್ನೇಹಿತರು ಮತ್ತು ಸಂಬಂಧಿಕರ ಬಳಿ ಇದ್ದ 41 ವಾಹನಗಳು ಸೇರಿದಂತೆ ಒಟ್ಟು 42 ಕಳುವಾದ ರಾಯಲ್ ಎನ್ಫೀಲ್ಡ್ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆಗ್ನೇಯ ವಿಭಾಗದ ಡಿಸಿಪಿ ಶ್ರೀಮತಿ ಸಾರಾ ಫಾತೀಮಾ ರವರ ಮಾರ್ಗದರ್ಶನದಲ್ಲಿ ಮತ್ತು ಮಡಿವಾಳ ಉಪ ವಿಭಾಗದ ಎಸಿಪಿ ಶ್ರೀ ವಿ.ಕೆ. ವಾಸುದೇವರವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಆಡುಗೋಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ ರವಿಕುಮಾರ.ಸಿ ಮತ್ತು ತಂಡ ಮಹತ್ವದ ಯಶಸ್ಸನ್ನು ಸಾಧಿಸಿದ್ದಾರೆ.









