“ರಾಜಧಾನಿ ಬೆಂಗಳೂರಿಗೆ ಹೊರರಾಜ್ಯ ಮತ್ತು ಹೊರಜಿಲ್ಲೆಗಳಿಂದ ಹರಿದುಬರುತ್ತಿರುವ ಮಾದಕ ದ್ರವ್ಯ ಜಾಲಕ್ಕೆ ಬ್ರೇಕ್ ಹಾಕಲು ಉತ್ತರ ವಿಭಾಗದ ಪೊಲೀಸರು ಇಂದು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ.
ಉತ್ತರ ವಿಭಾಗದ ಡಿಸಿಪಿ ಶ್ರೀ ಬಿ.ಎಸ್. ನೇಮಗೌಡಅವರ ಮಾರ್ಗದರ್ಶನದಲ್ಲಿ ಹಾಗೂ ಮಲ್ಲೇಶ್ವರಂ ಉಪ-ವಿಭಾಗದ ಎಸಿಪಿ ಶ್ರೀ ವೇಣುಗೋಪಾಲ್ಅವರ ನೇತೃತ್ವದಲ್ಲಿ ಇಂದು ಬೆಳಗಿನ ಜಾವ 4-00 ಗಂಟೆಯಿಂದಲೇ ಕಾರ್ಯಾಚರಣೆ ಆರಂಭವಾಯಿತು. ಶ್ರೀರಾಮಪುರ, ನಂದಿನಿ ಲೇಔಟ್, ಆರ್.ಎಂ.ಸಿ. ಯಾರ್ಡ್ ಮತ್ತು ಜಾಲಹಳ್ಳಿ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಹಾಗೂ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ತುಮಕೂರು ರಸ್ತೆಯ ಮೂಲಕ ನಗರ ಪ್ರವೇಶಿಸುವ ಒಟ್ಟು 253 ಸರ್ಕಾರಿ ಮತ್ತು ಖಾಸಗಿ ಬಸ್‌ಗಳನ್ನು ತಪಾಸಣೆ ಮಾಡಲಾಯಿತು. ವಿಶೇಷವೆಂದರೆ, ಮಾದಕ ದ್ರವ್ಯ ಪತ್ತೆ ಮಾಡುವ ತರಬೇತಿ ಪಡೆದ ಶ್ವಾನದಳಗಳ ವಿಶೇಷ ತಂಡವು ಬಸ್‌ಗಳಲ್ಲಿ ಅಡಗಿಸಿಟ್ಟಿರಬಹುದಾದ ಡ್ರಗ್ಸ್ ಮತ್ತು ಅನುಮಾನಾಸ್ಪದ ವಸ್ತುಗಳಿಗಾಗಿ ಕೂಲಂಕಷವಾಗಿ ಪರಿಶೀಲನೆ ನಡೆಸಿತು.
ಬೆಳಿಗ್ಗೆ 10:30ರ ವರೆಗೆ ಸತತ 6 ಗಂಟೆಗಳ ಕಾಲ ನಡೆದ ಈ ಹಠಾತ್ ತಪಾಸಣೆಯು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ.”









