ಸಿಲಿಕಾನ್ ಸಿಟಿಯಲ್ಲಿ ಮಾದಕ ದ್ರವ್ಯ ಜಾಲದ ವಿರುದ್ಧ ಸಿಸಿಬಿ ಮತ್ತು ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಾರಿ ಯಶಸ್ಸು ಸಿಕ್ಕಿದೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೇ ಟಾರ್ಗೆಟ್ ಆಗಿದ್ದ ಈ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ.
ಹೊರರಾಜ್ಯದ 8 ವ್ಯಕ್ತಿಗಳು ಹಾಗೂ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 16 ಆರೋಪಿಗಳನ್ನು ಬಂಧಿಸಲಾಗಿದೆ. ,3000 ಎಂಡಿಎಂಎ ಎಕ್ಸ್ಟಸಿ ಮಾತ್ರೆಗಳು (ಸುಮಾರು 2 ಕೆ.ಜಿ) ,230 ಗ್ರಾಂ ಎಂಡಿಎಂಎ ಕ್ರಿಸ್ಟಲ್. 48 ಕೆ.ಜಿ 750 ಗ್ರಾಂ ಗಾಂಜಾ ಮತ್ತು 306 ಗ್ರಾಂ ಹೈಡ್ರೋ ಗಾಂಜಾ, ಜಪ್ತಿ ಮಾಡಲಾದ ವಸ್ತುಗಳು .
ವಶಪಡಿಸಿಕೊಂಡ ಮಾದಕ ವಸ್ತುಗಳ ಅಂದಾಜು ಮಾರುಕಟ್ಟೆ ಮೌಲ್ಯ 5.24 ಕೋಟಿ.

ಮಾರತಹಳ್ಳಿ, ವಿದ್ಯಾರಣ್ಯಪುರ, ಮಹದೇವಪುರ ಸೇರಿದಂತೆ ನಗರದ ವಿವಿಧೆಡೆ ದಾಳಿ ನಡೆಸಿದ ಪೊಲೀಸರು, ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದೇಶಿ ಮತ್ತು ಹೊರರಾಜ್ಯದ ಮೂಲಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ, ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಇದೇ ವೇಳೆ ಬಾಗಲೂರು, ವೈಟ್ ಫೀಲ್ಡ್ ಸೇರಿದಂತೆ ವಿವಿಧೆಡೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ವಾಸವಿದ್ದು ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿದ್ದ 9 ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ. ಇವರಲ್ಲಿ ಇಬ್ಬರನ್ನು ಈಗಾಗಲೇ ಸ್ವದೇಶಕ್ಕೆ ವಾಪಸ್ ಕಳುಹಿಸಲಾಗಿದೆ.
ಸಿಸಿಬಿ ಡಿಸಿಪಿ ರಾಜಾ ಇಮಾಮ್ ಕಾಸಿಂ ಮತ್ತು ವಿವಿಧ ವಿಭಾಗದ ಡಿಸಿಪಿಗಳ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.









