ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಂಚೆಪಾಳ್ಯದ ಪ್ರಕೃತಿ ಲೇಔಟ್ನಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ಆಗಸ್ಟ್ನಲ್ಲಿ ಕುಟುಂಬ ಸಮೇತ ತಮಿಳುನಾಡಿಗೆ ತೆರಳಿದ್ದ ದೂರುದಾರರ ಮನೆಯ ಬೀಗ ಮುರಿದು ಕಳ್ಳರು ನೂರಾರು ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದರು.
ಪ್ರಕರಣದ ಬೆನ್ನತ್ತಿದ ಪೊಲೀಸರು ಮೊದಲು ಓರ್ವ ಆರೋಪಿಯನ್ನು ಬಂಧಿಸಿ 348 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದರು. ಈತನ ಮಾಹಿತಿ ಆಧರಿಸಿ ತಲೆಮರೆಸಿಕೊಂಡಿದ್ದ ಇಬ್ಬರು ಸಹಚರರನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಓರ್ವನನ್ನು ಮಲೆಮಹದೇಶ್ವರ ಬೆಟ್ಟದಲ್ಲಿ ಹಾಗೂ ಮತ್ತೊಬ್ಬನನ್ನು ಬನಶಂಕರಿಯ ಸಾರಕ್ಕಿಯಲ್ಲಿ ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳನ್ನು ಸುದೀರ್ಘ ವಿಚಾರಣೆಗೊಳಪಡಿಸಿದಾಗ, ಕಳವು ಮಾಡಿದ ಚಿನ್ನಾಭರಣಗಳನ್ನು ವಿವಿಧ ಜ್ಯುವೆಲರಿ ಅಂಗಡಿಗಳಲ್ಲಿ ಅಡಮಾನವಿಟ್ಟಿರುವುದು ಬೆಳಕಿಗೆ ಬಂದಿದೆ. ಈ ಕಾರ್ಯಾಚರಣೆಯಿಂದ ಒಟ್ಟು 1.40 ಕೋಟಿ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರ ಪೈಕಿ ಓರ್ವ ಆರೋಪಿ ಹಳೇ ಕ್ರಿಮಿನಲ್ ಆಗಿದ್ದು, ಈ ಹಿಂದೆ ಸುಮಾರು 30ಕ್ಕೂ ಹೆಚ್ಚು ಮನೆಗಳ್ಳತನ, ದರೋಡೆ ಯತ್ನ ಮತ್ತು ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಈ ಬಂಧನದಿಂದ ಮಾದನಾಯಕನಹಳ್ಳಿ ಠಾಣೆಯ 13 ಮತ್ತು ನೆಲಮಂಗಲ ಟೌನ್ ಠಾಣೆಯ 2 ಪ್ರಕರಣಗಳು ಸೇರಿ ಒಟ್ಟು 15 ಪ್ರಕರಣಗಳು ಇತ್ಯರ್ಥಗೊಂಡಿವೆ.
ಉಪ ಪೊಲೀಸ್ ಆಯುಕ್ತರಾದ ಶ್ರೀ ಡಿ.ಎಲ್. ನಾಗೇಶ್ (IPS) ಅವರ ಮಾರ್ಗದರ್ಶನದಲ್ಲಿ, ಇನ್ಸ್ಪೆಕ್ಟರ್ ಮುರಳಿಧರ ಎಂ.ಕೆ. ಮತ್ತು ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.









