ಬೆಂಗಳೂರಿನ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ, ಉಪ್ಪಾರಪೇಟೆ ಹಾಗೂ ಕಾಡುಗೋಡಿ ಪೊಲೀಸರು ಜಂಟಿಯಾಗಿ ನಗರದ ಮೂರು ಕಡೆಗಳಲ್ಲಿ ಭರ್ಜರಿ ದಾಳಿ ನಡೆಸಿದ್ದಾರೆ. ನಾಯಂಡಹಳ್ಳಿ ಸಿಗ್ನಲ್ ಬಳಿ, ಉಪ್ಪಾರಪೇಟೆಯ ಆರ್ಕೆ ಪುರಂ ಲಾಡ್ಜ್ ಹಾಗೂ ಕಾಡುಗೋಡಿಯ ಚನ್ನಸಂದ್ರ ಮುಖ್ಯರಸ್ತೆಯಲ್ಲಿ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ
ದಾಳಿಯ ವೇಳೆ ಹೊರರಾಜ್ಯದ ಓರ್ವ ವ್ಯಕ್ತಿ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಕಾಲೇಜು ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.ಬಂಧಿತರಿಂದ ಬೃಹತ್ ಪ್ರಮಾಣದ ಡ್ರಗ್ಸ್ ಎಂಡಿಎಂಎ (MDMA): 3 ಕೆಜಿ 912 ಗ್ರಾಂ , ಗಾಂಜಾ: 343 ಕೆಜಿ 170 ಗ್ರಾಂ , ಹಾಗೂ 1 ಟಾಟಾ ಐಚರ್ ಗೂಡ್ಸ್ ವಾಹನ ಮತ್ತು 1 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ .
ಜಪ್ತಿಯಾದ ವಸ್ತುಗಳ ಅಸಲು ಮೌಲ್ಯ 5.77 ಕೋಟಿಯಾಗಿದ್ದು, ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಬರೋಬ್ಬರಿ 11.04 ಕೋಟಿ ಎಂದು ಅಂದಾಜಿಸಲಾಗಿದೆ!

ಈ ಯಶಸ್ವಿ ಕಾರ್ಯಾಚರಣೆಯು ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ ಅಜಯ್ ಹಿಲೋರಿ (IPS), ಡಿಸಿಪಿಗಳಾದ ಶ್ರೀ ರಾಜ ಇಮಾಮ್ ಕಾಸಿಂ, ಶ್ರೀ ಯತೀಶ್ ಎನ್ (IPS), ಶ್ರೀ ಸೈದುಲು ಅಡಾವತ್ (IPS) ಅವರ ಮಾರ್ಗದರ್ಶನದಲ್ಲಿ ನಡೆದಿದೆ. ಎಸಿಪಿಗಳಾದ ಶ್ರೀ ಎಂ.ಎನ್. ನಾಗರಾಜ, ಶ್ರೀ ರಮೇಶ್ ಕೆ.ಎಂ, ಶ್ರೀಮತಿ ರೀನಾ ಸುವರ್ಣ ಹಾಗೂ ಇನ್ಸ್ಪೆಕ್ಟರ್ಗಳ ತಂಡ ಈ ಪ್ರಕರಣವನ್ನು ಬೇಧಿಸಿದೆ. ಮಾನ್ಯ ನ್ಯಾಯಾಲಯವು ಬಂಧಿತ ಐದೂ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.









