ಇಲ್ಲಿನ ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬೃಹತ್ ಮನೆ ಕಳವು ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೇವಲ ಎರಡು ವಾರಗಳಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಒಬ್ಬ ಆರೋಪಿಯನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಕಳೆದ ಮಾರ್ಚ್ 30 ರಂದು ಜಯನಗರ 4ನೇ ಟಿ ಬ್ಲಾಕ್ ನಿವಾಸಿಯೊಬ್ಬರು ದಿನಸಿ ತರಲು ಹೊರಹೋಗಿದ್ದ ಸಮಯದಲ್ಲಿ, ಅವರ ಮನೆಯ ಬೀಗ ಮುರಿದು ಕಳ್ಳರು ಒಳ ನುಗ್ಗಿದ್ದರು. ಸುಮಾರು 423 ಗ್ರಾಂ ಚಿನ್ನ, ಬೆಳ್ಳಿ ಹಾಗೂ 50 ಸಾವಿರ ನಗದನ್ನು ದೋಚಲಾಗಿತ್ತು. ಈ ಬಗ್ಗೆ ತಿಲಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಏಪ್ರಿಲ್ 6 ರಂದು ಬಾಣಸವಾಡಿಯ ಹೋಟೆಲ್ ಒಂದರ ಬಳಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು.15 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ, ಕದ್ದ ಮಾಲನ್ನು ಗಿರಿನಗರ, ಕೆ.ಆರ್. ಪುರಂನ ಜ್ಯುವೆಲ್ಲರಿ ಶಾಪ್‌ಗಳಲ್ಲಿ ಹಾಗೂ ರಾಮಮೂರ್ತಿನಗರದ ಪಾರ್ಕ್ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನದಲ್ಲಿ ಬಚ್ಚಿಟ್ಟಿರುವುದು ಪತ್ತೆಯಾಗಿದೆ.
ವಶಪಡಿಸಿಕೊಂಡ ವಸ್ತುಗಳು: 240 ಗ್ರಾಂ ಚಿನ್ನಾಭರಣ.89 ಗ್ರಾಂ ಬೆಳ್ಳಿಯ ವಸ್ತುಗಳು.ಕೃತ್ಯಕ್ಕೆ ಬಳಸಿದ್ದ 01 ದ್ವಿಚಕ್ರ ವಾಹನ. ಒಟ್ಟು ಮೌಲ್ಯ ಸುಮಾರು 35 ಲಕ್ಷ ರೂಪಾಯಿ.
ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್ ಸುಜೀತ ಎಂ.ಎಸ್ ಮಾರ್ಗದರ್ಶನದಲ್ಲಿ, ಎಸಿಪಿ ಶಿವಶಂಕರ್ ರೆಡ್ಡಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ವಿಶ್ವನಾಥ್ ಕೆಮತ್ತು ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.






