ಆನ್ಲೈನ್ ವಂಚನೆಗಳು ಭಾರತದಲ್ಲಿ ಸಾಮಾನ್ಯವಾಗಿದೆ. ಮೊಬೈಲ್, ಕಂಪ್ಯೂಟರ್ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿಕೊಂಡು ಖದೀಮರು ಹಣವನ್ನು ಲಪಟಾಯಿಸಲು ಹೊಸ ಹೊಸ ತಂತ್ರಗಳ ಮೊರೆ ಹೋಗುತ್ತಿದ್ದಾರೆ. OTP, ಲಿಂಕ್, ಒಂದನ್ನು ಒತ್ತಿ ಎಂದು ಹೇಳುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದ ಕಳ್ಳರು ಇದೀಗ ಇ-ಅರೆಸ್ಟ್ ಎಂಬ ನವ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇಂತಹದೇ ಪ್ರಕರಣವೊಂದು ಬೇಗೂರಿನ ರಾಘವೇಂದ್ರ ಲೇಔಟ್ನಲ್ಲಿ ನಡೆದಿದ್ದು, ಪೊಲೀಸರ ಸತತ ಪ್ರಯತ್ನದಿಂದ ವಂಚನೆಗೊಳಗಾದ ವ್ಯಕ್ತಿಗೆ ನಷ್ಟ ಪರಿಹಾರ ಪ್ರಾಪ್ತಿಯಾಗಿದೆ.
ಅಂದಹಾಗೆ ನವೆಂಬರ್ 11ರಂದು ಬೇಗೂರಿನ ನಿವಾಸಿಗಳೊಬ್ಬರಿಗೆ ಅಪರಿಚಿತ ವ್ಯಕ್ತಿಯಯೊಬ್ಬ ಕರೆ ಮಾಡಿ TRAI ( Telecom Regulatory authority of India ) ದಿಂದ ಕರೆಮಾಡುತ್ತಿದ್ದು, ನಿಮ್ಮ ಏರ್ಟೆಲ್ ಸಿಮ್ ಬ್ಲಾಕ್ ಮಾಡಲಾಗುತ್ತದೆ ಎಂದು ಹೆದರಿಸಿದ್ದನು. ಜೊತೆಗೆ ಮೊಬೈಲ್ ಸಂಖ್ಯೆಯು ಕಾನೂನು ಬಾಹಿರ ಚಟುವಟಿಕೆಯಲ್ಲಿ ಸಿಕ್ಕಿಬಿದ್ದಿದ್ದು, ನೀರವ್ ಅಗರ್ವಾಲ್ ಎಂಬಾತನ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ದೆಹಲಿಯ CBIಕಛೇರಿಗೆ ಹಾಜರಾಗುವುದು ಅಥವಾ ವಾಟ್ಸಾಪ್ ವಿಡಿಯೋಕಾಲ್ ನಲ್ಲಿ ವಿಚಾರಣೆಗೆ ಒಳಪಡುವಂತೆ ಮಾಡಿರುತ್ತಾರೆ. ಮನಿಲಾಂಡ್ರಿಂಗ್ ಸಂಬಂಧಿತ ಪ್ರಕರಣದಿಂದ ಪಾರಾಗಬೇಕೆಂದರೆ ಹಣವನ್ನು ಕಳಿಹಿಸಿ, RBIನ ನಿಯಮಾನುಸಾರ ಪರಿಶೀಲಿಸಿ ಮರುಸಂದಾಯ ಮಾಡುವುದಾಗಿ ನಂಬಿಸಿದ್ದಾರೆ. ಅದರಂತೆ 34,79,000ರೂ.ಗಳನ್ನು HDFC ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದರು.
ವಿವಿಧ ಆಯಾಮಗಳಿಂದ ತನಿಖೆಯನ್ನು ನಡೆಸಿದ ಪೊಲೀಸರು ಪರಪ್ಪನ ಅಗ್ರಹಾರದಲ್ಲಿ ಓರ್ವವನ್ನು ದಸ್ತಗಿರಿ ಮಾಡಿದ್ದು, ಆತನೇ ವಂಚನೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸುಧೀರ್ಘ ವಿಚಾರಣೆಯ ನಂತರ ಆತ ವಾಸವಿದ್ದ ಮನೆಯಲ್ಲಿ 1,07,100ರೂ.ಗಳನ್ನು ವಶಪಡಿಸಿಕೊಂಡಿದ್ದು, ಸಧ್ಯ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ.
ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಶ್ರೀಮತಿ. ಸಾರಾ ಫಾತಿಮಾ ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಉಪ ಪೊಲೀಸ್ ಆಯುಕ್ತರವರಾದ ಶ್ರೀ ಕೆ.ಎಮ್. ಸತೀಶ್ ರವರ ನೇತೃತ್ವದಲ್ಲಿ ಬೇಗೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಕೃಷ್ಣಕುಮಾರ್ ಪಿ.ಎಸ್. ಮತ್ತು ಸೈಬರ್ ಅಪರಾಧ ವಿಭಾಗದ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.










