ಬೆಂಗಳೂರು ನಗರ ಪೊಲೀಸರು ಸಿಸಿಬಿ ಅಧಿಕಾರಿಗಳ ಸೋಗಿನಲ್ಲಿ ಜನರನ್ನು ಬೆದರಿಸಿ, ಅಪಹರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಕರ್ನಾಟಕ ರಾಜ್ಯ ಜನ ಸದ್ಭಾವನಾ ಸಂಸ್ಥೆಯ ಸಂಸ್ಥಾಪಕರು ನೀಡಿದ ದೂರಿನ ಮೇರೆಗೆ ಈ ಪ್ರಕರಣ ಬೆಳಕಿಗೆ ಬಂದಿದೆ.
ದೂರುದಾರರು ಬಿಬಿಎಂಪಿ ತ್ಯಾಜ್ಯ ಸಂಗ್ರಹಕರಿಗೆ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದಾಗ, ನಾಸೀರ್ ಖಾನ್ ಮತ್ತು ಇತರರು ಹಲವು ವರ್ಷಗಳಿಂದ ಬಿಬಿಎಂಪಿ ತ್ಯಾಜ್ಯ ಸಂಗ್ರಹಕರಾದ ಫಾತಿಮಾ ಬೇಗಂ, ಇಮ್ರಾನ್, ಶಮೀರ್, ಮತ್ತು ಮೊಹಮ್ಮದ್ ಶಾ ಆಲಂ ಅವರನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿರುವುದು ತಿಳಿದುಬಂದಿದೆ. ಆರೋಪಿಗಳು ತಮ್ಮನ್ನು ಪೊಲೀಸ್ ಸಿಬ್ಬಂದಿ, ಸಿಸಿಬಿ ಮತ್ತು ಐಎಸ್‌ಡಿ ವಿಭಾಗದವರು ಎಂದು ಹೇಳಿಕೊಂಡು ಈ ಕೃತ್ಯ ಎಸಗುತ್ತಿದ್ದರು. ಕೆಲವರನ್ನು ಅಪಹರಿಸಿ ಹಣಕ್ಕಾಗಿ ಬಲವಂತಪಡಿಸುತ್ತಿದ್ದರು ಎಂದು ದೂರಲಾಗಿತ್ತು.
ಈ ಕಾರ್ಯಾಚರಣೆಯನ್ನು ಅಪರಾಧ ವಿಭಾಗದ ನಗರ ಜಂಟಿ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಹಾಗೂ ಅಪರಾಧ ವಿಭಾಗ 1ರ ಉಪ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಿಸಿಬಿ ಘಟಕದ ಸಂಘಟಿತ ಅಪರಾಧ ದಳದ ತಂಡ ಯಶಸ್ವಿಯಾಗಿ ನಿರ್ವಹಿಸಿದೆ.









