ಜಯನಗರದಲ್ಲಿ ಮನೆಗೆಲಸದಾಕೆಯಿಂದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳ ಕಳ್ಳತನ ಪ್ರಕರಣವನ್ನು ಸಿದ್ದಾಪುರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಸಂಬಂಧ ಆರೋಪಿಯನ್ನು ಬಂಧಿಸಿದ್ದು, ಕಳವು ಮಾಡಿದ 7 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದೂರುದಾರರು ಪುಣೆಗೆ ಹೋಗಿದ್ದಾಗ, ತಮ್ಮ ಲಾಕರ್‌ನಲ್ಲಿ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ನೋಡಿದ್ದರು. ಹಿಂತಿರುಗಿದಾಗ, ಲಾಕರ್‌ನಲ್ಲಿದ್ದ ವಸ್ತುಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು. ದೂರುದಾರರು ಈ ಹಿಂದೆ ಕೆಲಸ ಬಿಟ್ಟಿದ್ದ ಇಬ್ಬರು ಮಹಿಳೆಯರು ಮತ್ತು ಪ್ರಸ್ತುತ ಕೆಲಸ ಮಾಡುತ್ತಿರುವ ಮಹಿಳೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಮೂವರು ಮನೆಕೆಲಸದಾಕೆಯರನ್ನು ವಿಚಾರಣೆಗೆ ಒಳಪಡಿಸಿದಾಗ, ಪ್ರಸ್ತುತ ಕೆಲಸ ಮಾಡುತ್ತಿರುವ ಮಹಿಳೆಯು ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾಳೆ. ಆಕೆಯ ಮನೆಯಲ್ಲಿ ಮತ್ತು ವಿಲ್ಸನ್ ಗಾರ್ಡನ್‌ನಲ್ಲಿರುವ ಆಭರಣದ ಅಂಗಡಿಯಲ್ಲಿ ಮಾರಾಟ ಮಾಡಿರುವ ಬಗ್ಗೆ ಆಕೆ ಮಾಹಿತಿ ನೀಡಿದ್ದಾಳೆ. ಆರೋಪಿಯು ನೀಡಿದ ಮಾಹಿತಿಯ ಮೇರೆಗೆ, ಪೊಲೀಸರು 67 ಗ್ರಾಂ ಚಿನ್ನಾಭರಣ ಮತ್ತು 300 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಲೋಕೇಶ್ ಭರಮಪ್ಪ ಜಗಲಾಸರ್ ಐ.ಪಿ.ಎಸ್ ಮತ್ತು ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ನಾರಾಯಣಸ್ವಾಮಿ, ವಿ ರವರ ಮಾರ್ಗದರ್ಶನದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀ ಮೋಹನ್.ಡಿ.ಪಟೇಲ್ ಹಾಗೂ ಸಿಬ್ಬಂದಿಗಳ ತಂಡ ನಡೆಸಿದೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್









