ಹೊರರಾಜ್ಯದ ಇಬ್ಬರು ಡ್ರಗ್ ಪೆಡ್ಲರ್‌ಗಳು (ಒಬ್ಬ ಮಹಿಳೆ ಸೇರಿ) ಹಾಗೂ ವೀಸಾ ಅವಧಿ ಮುಗಿದಿದ್ದ ಇಬ್ಬರು ವಿದೇಶಿ ಮಹಿಳೆಯರ ಬಂಧನ.
8,335 ಎಲ್.ಎಸ್.ಡಿ ಸ್ಟ್ರಿಪ್ಸ್, 5 ಕೆಜಿ ಹೈಡ್ರೋ ಗಾಂಜಾ, 534 ಗ್ರಾಂ ಚರಸ್ ಮತ್ತು ಒಂದು ದ್ವಿಚಕ್ರ ವಾಹನ ವಶ.ಒಟ್ಟು ಮೌಲ್ಯ: ಅಂದಾಜು 11.50 ಕೋಟಿ.
ಬೆಂಗಳೂರು ನಗರ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳವು ನಗರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಂತರಾಷ್ಟ್ರೀಯ ಮಟ್ಟದ ಡ್ರಗ್ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.
ಬಾಗಲೂರು ವ್ಯಾಪ್ತಿ
ಎಸಿಪಿ ಹೆಚ್.ಕೆ. ಮಹಾನಂದ್ ನೇತೃತ್ವದ ತಂಡವು ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ, ಹೊರರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಇವರು ಥೈಲ್ಯಾಂಡ್‌ನಲ್ಲಿರುವ ಕೇರಳ ಮೂಲದ ವ್ಯಕ್ತಿಯ ನಿರ್ದೇಶನದಂತೆ ಬೆಂಗಳೂರಿನಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು. ಇವರಿಂದ ಭಾರಿ ಪ್ರಮಾಣದ ಎಲ್.ಎಸ್.ಡಿ ಸ್ಟ್ರಿಪ್ಸ್ ಹಾಗೂ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಪಾರ್ಸೆಲ್ ಮೂಲಕ ಡ್ರಗ್ಸ್
ಮತ್ತೊಂದು ಕಾರ್ಯಾಚರಣೆಯಲ್ಲಿ, ವಿದೇಶದಿಂದ ಅಂಚೆ ಮೂಲಕ ಬಂದಿದ್ದ 1.5 ಕೋಟಿ ಮೌಲ್ಯದ 1.5 ಕೆಜಿ ಹೈಡ್ರೋ ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಯಾರಿಗೂ ಅನುಮಾನ ಬರದಂತೆ ಚಾಕಲೇಟ್ ಮತ್ತು ಬಿಸ್ಕೆಟ್ ಬಾಕ್ಸ್‌ಗಳಲ್ಲಿ ಇವುಗಳನ್ನು ಪ್ಯಾಕ್ ಮಾಡಿದ್ದರು. ಈ ಸಂಬಂಧ ಕೆ.ಜಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದೇಶಿ ಮಹಿಳೆಯರ ವಶ
ಮೈಕೋಲೇಔಟ್ ವ್ಯಾಪ್ತಿಯಲ್ಲಿ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ವಾಸವಾಗಿದ್ದ ಇಬ್ಬರು ವಿದೇಶಿ ಮಹಿಳೆಯರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು, ಡಿಟೆನ್ಷನ್ ಸೆಂಟರ್‌ಗೆ ರವಾನಿಸಿದ್ದಾರೆ.
ಈ ಕಾರ್ಯಾಚರಣೆಯನ್ನು, ಶ್ರೀ.ಸೀಮಂತಕುಮಾರ್ ಸಿಂಗ್ ಬೆಂಗಳೂರು ನಗರದ ಪೊಲೀಸ್ ಆಯುಕ್ತರು ರವರ ಮಾರ್ಗದರ್ಶನದಲ್ಲಿ, ಶ್ರೀ.ಅಜಯ್ ಹಿಲೋರಿ, ಅಪರ ಪೊಲೀಸ್ ಆಯುಕ್ತರು, ಅಪರಾಧ, ಬೆಂಗಳೂರು ನಗರ ಮತ್ತು ಶ್ರೀ.ರಾಜಾ ಇಮಾಮ್ ಖಾಸಿಂ ಉಪ ಪೊಲೀಸ್ ಅಪರಾಧ-2, ಬೆಂಗಳೂರು ನಗರ ರವರ ನೇತೃತ್ವದಲ್ಲಿ, ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಎಸಿಪಿ ರವರಾದ ಶ್ರೀ.ಹೆಚ್.ಕೆ.ಮಹಾನಂದ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ರವರಾದ ಶ್ರೀ.ಮಂಜಪ್ಪ.ಸಿಎ, ಶ್ರೀ.ರಕ್ಷಿತ್.ಎಕೆ. ಶ್ರೀ.ವಿ.ಡಿ.ಶಿವರಾಜು ಮತ್ತು ಸಿಬ್ಬಂದಿಯವರ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.









