ಕಂಪನಿಯೊಂದರಲ್ಲಿ ಹೂಡಿಕೆ ಮಾಡಲು ಹಣ ತರುತ್ತಿದ್ದ ವ್ಯಕ್ತಿಯನ್ನು ಕಾರಿನ ಸಮೇತ ಅಪಹರಿಸಿ, ಬರೋಬ್ಬರಿ 1.09 ಕೋಟಿ ರೂಪಾಯಿ ದರೋಡೆ ಮಾಡಿದ್ದ ಐವರು ಕುಖ್ಯಾತ ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ಜೂನ್ 15 ರಂದು ರಾತ್ರಿ ವೇಳೆ, ಕುದುರೆಗೆರೆ ಕಾಲೋನಿ ಬಳಿ ಪಿರ್ಯಾದುದಾರರು ಮತ್ತು ಅವರ ಚಾಲಕ ಕಾರಿನ ಡಿಕ್ಕಿಯಲ್ಲಿ ₹74 ಲಕ್ಷ ಹಣವನ್ನಿಟ್ಟುಕೊಂಡು ಬರುತ್ತಿದ್ದರು. ಈ ವೇಳೆ ಕಾರು ಮತ್ತು ಬೈಕಿನಲ್ಲಿ ಬಂದ 7 ಜನರ ತಂಡ, ಚಾಕು ಹಾಗೂ ಬಿಯರ್ ಬಾಟಲಿಗಳಿಂದ ಹೆದರಿಸಿ ಇಬ್ಬರನ್ನೂ ಅಪಹರಿಸಿದೆ.ನೆಲಮಂಗಲದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ₹74 ಲಕ್ಷದೋಚಿದ್ದಲ್ಲದೆ, ಜೀವ ಬೆದರಿಕೆಯೊಡ್ಡಿ ಮನೆಯಿಂದ ಮತ್ತೊಮ್ಮೆ ₹35 ಲಕ್ಷ ಹಣವನ್ನು ತರಿಸಿಕೊಂಡಿದ್ದಾರೆ. ಒಟ್ಟು ₹1.09 ಕೋಟಿ ದೋಚಿ ಪರಾರಿಯಾಗಿದ್ದರು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಜೂನ್ 20 ರಂದು ಬಾಗೇಪಲ್ಲಿ ಬಳಿ ಮೊದಲ ಆರೋಪಿಯನ್ನು ಹಿಡಿದು ವಿಚಾರಣೆ ನಡೆಸಿದಾಗ ಇಡೀ ಗ್ಯಾಂಗ್ನ ಜಾತಕ ಹೊರಬಿದ್ದಿದೆ. ತದನಂತರ ಸೋಲದೇವನಹಳ್ಳಿ, ಬಿನ್ನಮಂಗಲ ಹಾಗೂ ಗೊರಗುಂಟೆಪಾಳ್ಯದಲ್ಲಿ ಕಾರ್ಯಾಚರಣೆ ನಡೆಸಿ ಉಳಿದ ನಾಲ್ವರನ್ನು ಹೆಡೆಮುರಿ ಕಟ್ಟಲಾಗಿದೆ.
ಬಂಧಿತ ಆರೋಪಿಗಳಿಂದ ₹85.50 ಲಕ್ಷ ರೂಪಾಯಿ ಹಣ ,ಕೃತ್ಯಕ್ಕೆ ಬಳಸಿದ್ದ 02 ಕಾರುಗಳು, 03 ಮೊಬೈಲ್ ಫೋನ್ಗಳು ಹಾಗೂ ಹೆದರಿಸಲು ಬಳಸಿದ್ದ 01 ಆಟಿಕೆ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.ಪೊಲೀಸ್ ವಿಚಾರಣೆಯಲ್ಲಿ ದಿಗ್ಭ್ರಮೆಗೊಳಿಸುವ ವಿಷಯ ಬೆಳಕಿಗೆ ಬಂದಿದೆ. ಪಿರ್ಯಾದುದಾರರ ಬಳಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಈ ದರೋಡೆಗೆ ಸ್ಕೆಚ್ ಹಾಕಿದ್ದ ಮುಖ್ಯ ಸೂತ್ರಧಾರಿ! ಮಾಲೀಕರು ಕಂಪನಿಯೊಂದಕ್ಕೆ ಹೂಡಿಕೆ ಮಾಡಲು ಕೋಟ್ಯಂತರ ಹಣ ತರುತ್ತಿರುವ ಸುಳಿವನ್ನು ಈತ ತನ್ನ ರೌಡಿ ಶೀಟರ್ ಸ್ನೇಹಿತರಿಗೆ ನೀಡಿದ್ದ. ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಈ ಹತ್ತು ಜನರ ಗ್ಯಾಂಗ್ ಒಟ್ಟಾಗಿ ಈ ಕೃತ್ಯ ಎಸಗಿತ್ತು.

ಸದ್ಯ ನ್ಯಾಯಾಲಯವು ಬಂಧಿತ ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ತಲೆಮರೆಸಿಕೊಂಡಿರುವ ಇನ್ನುಳಿದ ಐವರು ಆರೋಪಿಗಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ವಾಯುವ್ಯ ವಿಭಾಗದ ಡಿಸಿಪಿ ಡಿ.ಎಲ್. ನಾಗೇಶ್ ಅವರ ಮಾರ್ಗದರ್ಶನದಲ್ಲಿ, ಎಸಿಪಿ ಅಶೋಕ್ ಎಂ.ಎಸ್ಮತ್ತು ಇನ್ಸ್ಪೆಕ್ಟರ್ ಎಂ. ಪ್ರಶಾಂತ್ ಅವರ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.









