ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟ್ಲೈಟ್ ಬಸ್ ನಿಲ್ದಾಣದ ಬಳಿ ಬ್ಯಾಟರಾಯನಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರಿ ವೇಳೆ ಅಕ್ರಮವಾಗಿ ಮಾರಕಾಸ್ತ್ರಗಳನ್ನು ಮಾರಾಟ ಮಾಡಲು ಬಂದಿದ್ದ ಖತರ್ನಾಕ್ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಬರೋಬ್ಬರಿ 15 ಲಕ್ಷ ರೂಪಾಯಿ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜುಲೈ 1 ರಂದು ಬ್ಯಾಟರಾಯನಪುರ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಭಾತ್ಮೀದಾರರಿಂದ ಖಚಿತ ಮಾಹಿತಿ ಲಭಿಸಿತ್ತು. ಮೈಸೂರು ರಸ್ತೆಯ ಸ್ಯಾಟ್ಲೈಟ್ ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಮಾರಕಾಸ್ತ್ರಗಳನ್ನು ಮಾರಾಟ ಮಾಡಲು ನಿಂತಿದ್ದಾನೆ ಎಂಬ ಸುಳಿವು ಸಿಗುತ್ತಿದ್ದಂತೆ ಪೊಲೀಸರು ತಕ್ಷಣ ಅಲರ್ಟ್ ಆಗಿದ್ದಾರೆ. ಸ್ಥಳದ ಮೇಲೆ ದಾಳಿ ನಡೆಸಿದ ಪೊಲೀಸರು, ಬ್ಯಾಗ್ನಲ್ಲಿದ್ದ 5 ಮಾರಕಾಸ್ತ್ರಗಳ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಹೆಚ್ಚು ಹಣ ಗಳಿಸುವ ಆಸೆಯಿಂದ ತಾನು ಮಾರಕಾಸ್ತ್ರ ಮಾರಾಟಕ್ಕೆ ಇಳಿದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಇದಾದ ಬಳಿಕ ಜುಲೈ 2 ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಈ ವೇಳೆ ಆರೋಪಿ ನೀಡಿದ ಶಾಕಿಂಗ್ ಮಾಹಿತಿ ಕೇಳಿ ಪೊಲೀಸರೇ ದಂಗಾಗಿದ್ದಾರೆ! ಈತ ಕೇವಲ ಮಾರಕಾಸ್ತ್ರ ಮಾತ್ರವಲ್ಲ, ಸಾರ್ವಜನಿಕರಿಗೆ ಗಾಂಜಾವನ್ನೂ ಮಾರಾಟ ಮಾಡುತ್ತಿದ್ದ. ಗಾಂಜಾ ಖರೀದಿಸಲು ಬರುವ ಗ್ರಾಹಕರ ಬಳಿ ಹಣವಿಲ್ಲದಿದ್ದರೆ, ಅವರ ಮೊಬೈಲ್ ಫೋನ್ಗಳನ್ನೇ ಇಸ್ಕೊಂಡು ಗಾಂಜಾ ಕೊಡುತ್ತಿದ್ದ ಎಂಬ ಕರಾಳ ಸತ್ಯ ಬಯಲಾಗಿದೆ.
ಆರೋಪಿ ನೀಡಿದ ಪಕ್ಕಾ ಮಾಹಿತಿಯ ಮೇರೆಗೆ ಜುಲೈ 3 ರಂದು ಆತನ ವಾಸದ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು, ಅಲ್ಲಿ ಸಂಗ್ರಹಿಸಿಟ್ಟಿದ್ದ ವಿವಿಧ ಬಗೆಯ 13 ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಆರೋಪಿಯಿಂದ ಒಟ್ಟು 18 ಮಾರಕಾಸ್ತ್ರಗಳು, 771 ಗ್ರಾಂ ಗಾಂಜಾ ಮತ್ತು ವಿವಿಧ ಕಂಪನಿಯ ಬರೋಬ್ಬರಿ 237 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರು 15 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ (DCP) ಶ್ರೀ ಯತೀಶ್ ಎನ್. (IPS) ರವರ ಮಾರ್ಗದರ್ಶನದಲ್ಲಿ, ಬ್ಯಾಟರಾಯನಪುರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ (ACP) ಶ್ರೀ ಉದಯ ಭಾಸ್ಕರ ಜಿ.ವಿ. ರವರ ನೇತೃತ್ವದಲ್ಲಿ, ಬ್ಯಾಟರಾಯನಪುರ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ವೆಂಕಟೇಶ್ ಹೆಚ್.ಎಸ್. ಹಾಗೂ ಸಿಬ್ಬಂದಿಗಳ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿ, ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.









