ಮಡಿವಾಳ ಪೊಲೀಸ್ ಠಾಣಾ ಸರಹದ್ದಿನಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:23/12/2024 ರಂದು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:20/12/2024 ರಂದು ಭುವನಪ್ಪ ಲೇಔಟ್, ಬಿ.ಟಿ.ಎಂ. 1 ನೇ ಹಂತದಲ್ಲಿರುವ ಪಿರಾದುದಾರರ ,ತಾವರೆಕೆರೆ ಮುಖ್ಯರಸ್ತೆಯಲ್ಲಿರುವ ಟೆರೇಸ್ ಕೆಫೆ ಹೋಟೆಲ್ಹೋಟೆಲ್‌ನಲ್ಲಿ ಓರ್ವ ವ್ಯಕ್ತಿಯು ಈಗ್ಗೆ ಎರಡು ತಿಂಗಳಿನಿಂದ ಹೋಟೆಲ್‌ನ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಈತನು ಹೋಟೆಲ್‌ನಲ್ಲಿರುವ ಬೆಲೆಬಾಳುವ ತಾಮ್ರ ಮತ್ತು ಹಿತ್ತಾಳೆಯ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಮಡಿವಾಳ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಭಾತ್ಮೀದಾರರಿಂದ ಮಾಹಿತಿಯನ್ನು ಕಲೆಹಾಕಿ ದಿನಾಂಕ:27/12/2024 ರಂದು ಚಿಕ್ಕ ಅಡುಗೋಡಿ ಮುಖ್ಯರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ವೊಂದರ ಮುಂಭಾಗ, ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ, ತಾನು ಕೆಲಸ ಮಾಡುವ ಹೋಟೆಲ್‌ನಲ್ಲಿ ತಾಮ್ರ ಮತ್ತು ಹಿತ್ತಾಳೆಯ ವಸ್ತುಗಳನ್ನು ಕಳವು ಮಾಡಿರುವುದಾಗಿ ತಪ್ಪಿಪ್ಪಿಕೊಂಡಿರುತ್ತಾನೆ. ಹಾಗೂ ಕಳವು ಮಾಡಿದ ವಸ್ತುಗಳ ಪೈಕಿ ಕೆಲವು ವಸ್ತುಗಳನ್ನು ಕಾಟನ್ ಪೇಟೆಯ ಒಂದು ಗುಜುರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ, ಹಾಗೂ ಇನ್ನುಳಿದ ವಸ್ತುಗಳನ್ನು ಆತನ ಸ್ವಂತ ಊರಿನ ವಾಸದ ಮನೆಯಲ್ಲಿಟ್ಟಿರುವುದಾಗಿ ತಿಳಿಸಿರುತ್ತಾನೆ.

ದಿನಾಂಕ:28/12/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ 4 ದಿನಗಳ ಕಾಲ ಪೊಲೀಸ್’ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆ ಮಾಡಿ, ಆರೋಪಿಯು ನೀಡಿದ ಮಾಹಿತಿಯ ಮೇರೆಗೆ, ದಿನಾಂಕ:28/12/2024 ರಂದು ಕಾಟನ್ ಪೇಟೆಯ ಗುಜರಿ ಅಂಗಡಿಯಿಂದ
1) 02 ಹಿತ್ತಾಳೆಯ ದೀಪಗಳು
2) 01 ಹಿತ್ತಾಳೆಯ ಟೇಬಲ್
3) 10 ತಾಮ್ರದ ಜಗ್ಗುಗಳು.
4) 85 ತಾಮ್ರದ ಲೋಟಗಳು
5) 01 ಹಿತ್ತಾಳೆಯ ಗಣೇಶನ ಮುಖ ಇರುವ ವೀಣೆ. ಇವುಗಳನ್ನು ವಶಪಡಿಸಿಕೊಳ್ಳಲಾಯಿತು.

ದಿನಾಂಕ:28/12/2024 ರಂದು ಆರೋಪಿಯು ತನ್ನ ಸ್ವಂತ ಊರಾದ ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿಯ ಮನೆಯಲ್ಲಿಟ್ಟಿದ್ದ
1) 19 ತಾಮ್ರದ ಬೌಲ್‌ಗಳು 2) ಕೃಷ್ಣ, ಹಸು ಇರುವ ಹಿತ್ತಾಳೆಯ ದೇವರ ವಿಗ್ರಹವನ್ನು ಆರೋಪಿತನ ಸಂಬಂಧಿಯೋರ್ವನು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಇವುಗಳ ಒಟ್ಟು ಮೌಲ್ಯ 4,50,000/-(ನಾಲ್ಕು ಲಕ್ಷದ ಐವತ್ತು ಸಾವಿರ ರೂಪಾಯಿ).
31/12/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ, ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ ಸಾರಾ ಫಾತಿಮಾ, ಐ.ಪಿ.ಎಸ್ ರವರು ಮತ್ತು ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಲಕ್ಷ್ಮೀನಾರಾಯಣ ಕೆ.ಸಿ. ರವರುಗಳ ಮಾರ್ಗದರ್ಶನದಲ್ಲಿ, ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಮೊಹಮ್ಮದ್ ಎಂ.ಎ. ರವರ ಅಧಿಕಾರಿ ಸಬ್ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಹಾಗೂ ಸಿಬ್ಬಂದಿಗಳ ತಂಡ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.










