ದೇವಸ್ಥಾನಗಳ ಬೀಗ ಮುರಿದು ಚಿನ್ನ, ಬೆಳ್ಳಿ ಮತ್ತು ಕಾಣಿಕೆ ಹುಂಡಿಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 5 ಕೆ.ಜಿ. ಬೆಳ್ಳಿಯ ವಸ್ತುಗಳು, 67 ಗ್ರಾಂ ಚಿನ್ನಾಭರಣ, 1,426 ಗ್ರಾಂ ಹಿತ್ತಾಳೆ ವಸ್ತುಗಳು ಮತ್ತು 353 ಗ್ರಾಂ ತಾಮ್ರದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ₹14 ಲಕ್ಷ ಎಂದು ಅಂದಾಜಿಸಲಾಗಿದೆ.
ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಿ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರ ದೂರಿನಲ್ಲಿ, ಅರ್ಚಕನಂತೆ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದ ಒಬ್ಬ ವ್ಯಕ್ತಿ ಬೆಳ್ಳಿಯ ಛತ್ರಿ ಮತ್ತು ದೀಪದ ಕಂಬಗಳನ್ನು ಕಳವು ಮಾಡಿದ್ದಾನೆ ಎಂದು ತಿಳಿಸಿದ್ದರು.ಪೊಲೀಸರು ತನಿಖೆ ನಡೆಸಿ ಅದೇ ದಿನ ರಾತ್ರಿ ಗೊಟ್ಟಿಗೆರೆಯಲ್ಲಿ ದ್ವಿ-ಚಕ್ರ ವಾಹನದ ಸಮೇತ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದರು. ಅಲ್ಲದೆ, ಬೆಂಗಳೂರಿನ ಹಲವೆಡೆ ಇದೇ ರೀತಿಯ ಕಳ್ಳತನಗಳನ್ನು ಎಸಗಿರುವುದಾಗಿ ತಿಳಿಸಿದ್ದಾರೆ. ಈ ಇಬ್ಬರು ಆರೋಪಿಗಳ ಬಂಧನದಿಂದ ಬನಶಂಕರಿ ಪೊಲೀಸ್ ಠಾಣೆಯ 2 ಪ್ರಕರಣಗಳು ಸೇರಿ ಒಟ್ಟು 13 ದೇವಸ್ಥಾನ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಜಯನಗರ, ಸುಬ್ರಮಣ್ಯಪುರ, ಕುಮಾರಸ್ವಾಮಿ ಲೇಔಟ್, ಗಿರಿನಗರ, ರಾಜರಾಜೇಶ್ವರಿ ನಗರ, ಕಾಡುಗೊಂಡನಹಳ್ಳಿ, ಕೆಂಗೇರಿ, ಸಂಪಿಗೆಹಳ್ಳಿ, ತಲಘಟ್ಟಪುರ ಮತ್ತು ಜಿಗಣಿ ಪೊಲೀಸ್ ಠಾಣೆಗಳ ತಲಾ ಒಂದು ಪ್ರಕರಣ ಸೇರಿದೆ.
ಈ ಯಶಸ್ವಿ ಕಾರ್ಯಾಚರಣೆಯು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಲೋಕೇಶ್ ಭರಮಪ್ಪ ಜಗಲಾಸರ್ ಮತ್ತು ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ವಿ ನಾರಾಯಣಸ್ವಾಮಿ ಅವರ ಮಾರ್ಗದರ್ಶನದಲ್ಲಿ, ಬನಶಂಕರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ. ಕೋಟ್ರೇಶಿ ಬಿಎಮ್ ಸಿಬ್ಬಂದಿಗಳಿಂದ ನಡೆದಿದೆ.








