1 ಕೆಜಿ 700 ಗ್ರಾಂ ಚಿನ್ನಾಭರಣ ವಶ. ಮೌಲ್ಯ 1 ಕೋಟಿ 36 ಲಕ್ಷ, ಅನ್ನಪೂರ್ಣೇಶ್ವರಿನಗರ ಪೊಲೀಸ್ ಸರಹದ್ದಿನ, ಆರೋಗ್ಯ ಬಡಾವಣೆಯಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:19/08/2023 ರಂದು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಅವರ ಕುಟುಂಬ ಸಮೇತ ದಿನಾಂಕ:19/08/2023 ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿಕೊಂಡು ಹೊರಗಡೆ ಹೋಗಿ ಮತ್ತೆ ಸಂಜೆ ವಾಪಸ್ ಬಂದು ನೋಡಲಾಗಿ, ಯಾರೋ ಕಳ್ಳರು ಮನೆಯ ಮುಂಭಾಗಿಲಿನ ಡೋರ್ಲಾಕ್ನ್ನು ಮೀಟಿ ಒಳಗೆ ಪ್ರವೇಶಿಸಿ, ಕೊಠಡಿಯಲ್ಲಿನ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡರು ಸಹ ಆರೋಪಿಯ ಸುಳಿವು ದೊರೆತ್ತಿರುವುದಿಲ್ಲ. ತನಿಖೆಯನ್ನು ಮುಂದುವರೆಸಿ, ಭಾತ್ಮಿದಾರರಿಂದ ಮಾಹಿತಿಯನ್ನು ಕಲೆಹಾಕಿ, ದಿನಾಂಕ:09/11/2024 ರಂದು ಓರ್ವ ವ್ಯಕ್ತಿಯನ್ನು ಉತ್ತರ ಪ್ರದೇಶದ ಮುರಾದಾಬಾದ್ನ ಜಿಲ್ಲಾ ಕಾರಾಗೃಹದಿಂದ ಬಾಡಿ ವಾರೆಂಟ್ ಮುಖೇನ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಹಾಗೂ ಬೆಂಗಳೂರು ನಗರದಲ್ಲಿ ವಿವಿಧ ಕಡೆಗಳಲ್ಲಿ ಕನ್ನ ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:10/01/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು. ತನಿಖೆಯು ಪೂರ್ಣಗೊಳ್ಳದಿದ್ದರಿಂದ ಆರೋಪಿಯನ್ನು ಇನ್ನೂ ಹೆಚ್ಚಿನ ವಿಚಾರಣೆಗಾಗಿ ಪುನಃ 11 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.

ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಮನೆ ಕನ್ನ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಉತ್ತರ ಪ್ರದೇಶದ ವಿವಿಧ ಗಿರವಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:14/11/2024 ರಂದು ಮುಂಬೈನ ಜವಾರಿ ಬಜಾರ್ನ ಗಿರವಿ ಅಂಗಡಿಯ ಮಾಲೀಕನಿಗೆ ಮಾರಾಟ ಮಾಡಿದ್ದ, 501 ಗ್ರಾಂ ಚಿನ್ನಾಭರಣಗಳನ್ನು ಹಾಗೂ ಅದೇ ದಿನ ಜವಾರಿ ಬಜಾರ್ನ ಮತ್ತೊಂದು ಗಿರವಿ ಅಂಗಡಿಯಿಂದ 160 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು.
ದಿನಾಂಕ:15/11/2024 ರಂದು ನವಿ ಮುಂಬೈನ ಗಿರವಿ ಅಂಗಡಿಯೊಂದರಿಂದ 70 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು. ಅದೇ ದಿನ ಮತ್ತೊಂದು ಗಿರವಿ ಅಂಗಡಿಯ ಮಾಲೀಕನಿಗೆ ಚಿನ್ನಾಭರಣವನ್ನು ತಂದು ಹಾಜರುಪಡಿಸುವಂತೆ ನೋಟೀಸ್ ಜಾರಿ ಮಾಡಲಾಗಿರುತ್ತದೆ.
ದಿನಾಂಕ:18/11/2024 ರಂದು ಗುರುಗಾವ್ನ ಗಿರವಿ ಅಂಗಡಿಯೊಂದರಿಂದ 130 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು.
ದಿನಾಂಕ:21/11/2024 ರಂದು ಸಂಭಲ್ ಜಿಲ್ಲೆಯ ಗಿರವಿ ಅಂಗಡಿಯೊಂದರಿಂದ 662 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು.
ದಿನಾಂಕ:30/11/2024 ರಂದು ನವಿ ಮುಂಬೈನ ಗಿರವಿ ಅಂಗಡಿಯ ಮಾಲೀಕನು ನೋಟಿಸ್ಗೆ ಸ್ಪಂದಿಸಿ, 177 ಗ್ರಾಂ ಚಿನ್ನಾಭರಣಗಳನ್ನು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಈ ಪ್ರಕರಣದ ಆರೋಪಿಯ ವಶದಿಂದ ಒಟ್ಟಾರೆ 1 ಕೆ.ಜಿ 700 ಗ್ರಾಂನ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇದರ ಮೌಲ್ಯ 1,36,00,000/-(ಒಂದು ಕೋಟಿ ಮೂವತ್ತಾರು ಲಕ್ಷ ರೂಪಾಯಿ).
ಈ ಪ್ರಕರಣದ ಆರೋಪಿಯ ಬಂಧನದಿಂದ 1) ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ-6 ಕನ್ನ ಕಳವು ಪ್ರಕರಣಗಳು, 2) ಕೆಂಗೇರಿ ಪೊಲೀಸ್ ಠಾಣೆಯ ಕನ್ನ ಕಳವು ಪ್ರಕರಣ, 3) ಜ್ಞಾನಭಾರತಿ ಪೊಲೀಸ್ ಠಾಣೆಯ- ಕನ್ನ ಕಳವು ಪ್ರಕರಣ. 4) ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಯ- ಕನ್ನ ಕಳವು ಪ್ರಕರಣ, 5) ಪೀಣ್ಯ ಪೊಲೀಸ್ ಠಾಣೆಯ-1 ಕನ್ನ ಕಳವು ಪ್ರಕರಣ, 6) ಬಾಣಾಸವಾಡಿ ಪೊಲೀಸ್ ಠಾಣೆಯ- ಕನ್ನ ಕಳವು ಪ್ರಕರಣ ಸೇರಿದಂತೆ ಒಟ್ಟು 11 ಕನ್ನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.
ದಿನಾಂಕ:30/11/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ. ಈ ಆರೋಪಿಯನ್ನು ದಿನಾಂಕ:02/12/2024 ರಂದು ಉತ್ತರ ಪ್ರದೇಶದ ಮುರಾದಾಬಾದ್ನ ಜಿಲ್ಲಾ ಕಾರಾಗೃಹಕ್ಕೆ ಮನಃ ಒಪ್ಪಿಸಲಾಗಿರುತ್ತದೆ.

ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಉಪ ಪೊಲೀಸ್ ಕಮೀಷನರ್ ರವರಾದ, ಶ್ರೀ.ಗಿರೀಶ್.ಎಸ್, ಐ.ಪಿ.ಎಸ್ರವರ ಸೂಕ್ತ ಮಾರ್ಗದರ್ಶನದಲ್ಲಿ ಶ್ರೀ.ಬಸವರಾಜ ಎ ತೇಲಿ ಕೆಂಗೇರಿ ಉಪ-ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ರವರ ನಿರ್ದೇಶನದಲ್ಲಿ, ಶ್ರೀ. ಕುಮಾರ್ ಎ.ವಿ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವರ ನೇತೃತ್ವದ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.









