ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಬಿ.ಟಿ.ಎಂ ಲೇಔಟ್‌ನಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:17/05/2024 ರಂದು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:16/05/2024 ರಂದು ರಾತ್ರಿ ಪಿರಾದುದಾರರು ವಾಸವಿರುವ ಮನೆಯ ಮುಂದೆ ನಿಲ್ಲಿಸಿದ್ದ 2 ದ್ವಿ-ಚಕ್ರ ವಾಹನಗಳನ್ನು ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡರೂ ಆರೋಪಿಗಳ ಬಗ್ಗೆ ಮಾಹಿತಿ ದೊರೆತಿರುವುದಿಲ್ಲ. ತನಿಖೆಯನ್ನು ಮುಂದುವರೆಸಿದ ಬಾತ್ಮೀದಾರರಿಂದ ಈ ಪ್ರಕರಣದ ಆರೋಪಿಗಳ ಬಗ್ಗೆ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:20/11/2024 ರಂದು ಕಡಪ ಜಿಲ್ಲೆಯ ಪೋರಮಮಿಲ್ಲಾ ಟೌನ್‌ನಲ್ಲಿರುವ ಒಂದು ಗ್ಯಾರೇಜ್‌ನಲ್ಲಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ, ಈ ಪ್ರಕರಣದ 2 ದ್ವಿ-ಚಕ್ರ ವಾಹನ ಸೇರಿದಂತೆ ಒಟ್ಟು 7 ದ್ವಿ-ಚಕ್ರ ವಾಹನಗಳನ್ನು ಬೆಂಗಳೂರಿನ ಶಿವಾಜಿನಗರದ ವಾಸಿಯಾದ ಓರ್ವ ವ್ಯಕ್ತಿಯು ನೀಡಿದ್ದಾಗಿ ತಿಳಿಸಿರುತ್ತಾನೆ. ಆರೋಪಿಯ ಅಣ್ಣನಿಗೆ 7 ದ್ವಿ-ಚಕ್ರ ವಾಹನಗಳನ್ನು ಬೆಂಗಳೂರಿನ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆಗೆ ಹಾಜರುಪಡಿಸುವಂತೆ ನೋಟಿಸ್ ಜಾರಿ ಮಾಡಿರುತ್ತೆ.
ದಿನಾಂಕ:21/11/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು.
ತನಿಖೆಯನ್ನು ಮುಂದುವರೆಸಿ, ದಿನಾಂಕ:22/11/2024 ರಂದು ಆರೋಪಿಯ ಸಹಚರನನ್ನು ಶಿವಾಜಿನಗರದ ರಸ್ತೆಯಲ್ಲಿರುವ ದ್ವಿ-ಚಕ್ರ ವಾಹನಗಳ ಸ್ಪೇರ್ ಪಾರ್ಟ್ಸ್ ಅಂಗಡಿಯೊಂದರಿಂದ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ ಈ ಪ್ರಕರಣದಲ್ಲಿ 2 ದ್ವಿ-ಚಕ್ರ ವಾಹನಗಳನ್ನು ಕಡಪದಲ್ಲಿರುವ ಒಂದು ಗ್ಯಾರೇಜ್‌ನಲ್ಲಿರುವ ಓರ್ವ ವ್ಯಕ್ತಿಗೆ ಮಾರಾಟ ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ ಅಲ್ಲದೆ ಇತರ 5 ದ್ವಿ-ಚಕ್ರ ವಾಹನಗಳನ್ನು ಕೇಂದ್ರ ಕಾರಾಗೃಹದಲ್ಲಿರುವ ಓರ್ವ ಆರೋಪಿಯಿಂದ ಪಡೆದಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:23/11/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 12 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು.
ದಿನಾಂಕ:27/11/2024 ರಂದು ಕಡಪ ಜಿಲ್ಲೆಯ ಆಂದ್ರಪ್ರದೇಶದಲ್ಲಿ ನೀಡಿದ ನೋಟಿಸ್ ಮೇರೆಗೆ 7 ದ್ವಿ-ಚಕ್ರ ವಾಹನಗಳನ್ನು ಆರೋಪಿಯ ಅಣ್ಣನು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ವಶಪಡಿಸಿಕೊಳ್ಳಲಾಯಿತು.

ದಿನಾಂಕ:04/12/2024 ರಂದು ಶಿವಾಜಿನಗರದಲ್ಲಿರುವ ಆರೋಪಿಯ ಅಣ್ಣನು 6 ದ್ವಿ-ಚಕ್ರ ವಾಹನಗಳನ್ನು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ವಶಪಡಿಸಿಕೊಳ್ಳಲಾಯಿತು.
ಶಿವಾಜಿನಗರದ ಆರೋಪಿಯು ತನಗೆ ಕೇಂದ್ರ ಕಾರಾಗೃಹದಲ್ಲಿರುವ ಇಬ್ಬರು ಆರೋಪಿಗಳು ಒಟ್ಟು 13 ದ್ವಿ-ಚಕ್ರ ವಾಹನಗಳನ್ನು ನೀಡಿ ಹಣವನ್ನು ಪಡೆದಿರುವುದಾಗಿ ತಿಳಿಸಿರುತ್ತಾನೆ.
ಕೇಂದ್ರ ಕಾರಾಗೃಹದಲ್ಲಿರುವ ಇಬ್ಬರು ಆರೋಪಿಗಳನ್ನು ದಿನಾಂಕ:30/11/2024 ರಂದು ಮಾನ್ಯ ನ್ಯಾಯಾಲಯದ ಅದೇಶದ ಮೇರೆಗೆ 5 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಗಳಿಬ್ಬರನ್ನು ವಿಚಾರಣೆಗೊಳಪಡಿಸಿದಾಗ, ಈ ಪ್ರಕರಣದಲ್ಲಿ ಕಳುವಾಗಿದ್ದ 2 ದ್ವಿ-ಚಕ್ರ ವಾಹನಗಳು ಸೇರಿದಂತೆ, ಇತರ 11 ದ್ವಿ-ಚಕ್ರ ವಾಹನಗಳ ಬಗ್ಗೆ ಮಾಹಿತಿಯನ್ನು ನೀಡಿ, ತನ್ನೊಪ್ಪಿಕೊಂಡಿರುತ್ತಾರೆ.
ಈ ಆರೋಪಿಗಳ ಬಂಧನದಿಂದ, ಒಟ್ಟು 13 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 21,00,000/-(ಇಪ್ಪತ್ತೊಂದು ಲಕ್ಷ ರೂಪಾಯಿ).
ಈ ಪ್ರಕರಣದ ಆರೋಪಿಗಳ ಬಂಧನದಿಂದ, 1) ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯ-2 ದ್ವಿ-ಚಕ್ರ ವಾಹನ ಕಳವು ಪ್ರಕರಣ, 2) ಮಡಿವಾಳ ಪೊಲೀಸ್ ಠಾಣೆಯ-1 ದ್ವಿ-ಚಕ್ರ ವಾಹನ ಕಳವು ಪ್ರಕರಣ, 3) ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ-1 ದ್ವಿ-ಚಕ್ರ ವಾಹನ ಕಳವು ಪ್ರಕರಣ, 4) ಹಲಸೂರು ಪೊಲೀಸ್ ಠಾಣೆಯ-1 ದ್ವಿ-ಚಕ್ರ ವಾಹನ ಕಳವು ಪ್ರಕರಣ, 5) ಹೆಚ್.ಎ.ಎಲ್ ಪೊಲೀಸ್ ಠಾಣೆಯ-1 ದ್ವಿ-ಚಕ್ರ ವಾಹನ ಕಳವು ಪ್ರಕರಣ, 6) ಜಿಗಣಿ ಪೊಲೀಸ್ ಠಾಣೆಯ-1 ದ್ವಿ ಚಕ್ರ ವಾಹನ ಕಳವು ಪ್ರಕರಣ, ಒಟ್ಟು 7 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಉಳಿದ 5 ದ್ವಿ-ಚಕ್ರ ವಾಹನಗಳ ಮಾಲೀಕರುಗಳು ಪತ್ತೆಯಾಗಬೇಕಾಗಿರುತ್ತದೆ. ತನಿಖೆ ಪ್ರಗತಿಯಲ್ಲಿದೆ.
ದಿನಾಂಕ:04/12/2024 ರಂದು ಈ ಪ್ರಕರಣದ ನಾಲ್ವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.

ಈ ಕಾರ್ಯಾಚರಣೆಯನ್ನು ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಶ್ರೀಮತಿ, ಸಾರಾ ಫಾತೀಮಾ, ಐ.ಪಿ.ಎಸ್ ರವರ ನಿರ್ದೇಶನದಲ್ಲಿ, ಶ್ರೀ. ಶಿವಶಂಕರ ರೆಡ್ಡಿ, ಸಹಾಯಕ ಪೊಲೀಸ್ ಕಮೀಷನರ್, ಮೈಕೋಲೇಔಟ್ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ.ಮಾರುತಿ ಜಿ. ನಾಯಕಪೊಲೀಸ್ ಇನ್ಸ್ಪೆಕ್ಟರ್ ರವರ ನೇತೃತ್ವದಲ್ಲಿ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.









