ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿ ರಾತ್ರಿ ವೇಳೆ ಕನ್ನ ಹಾಕುತ್ತಿದ್ದ ಆರೋಪಿಯ ಸೆರೆ.ಬೆಂಗಳೂರಿನ ಪೂರ್ವ ವಿಭಾಗದ ಬೈಯಪ್ಪನಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮನೆಗಳ ಕನ್ನ ಕಳವು ಮಾಡುತ್ತಿದ್ದ ಓರ್ವ ಕುಖ್ಯಾತ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಬರೋಬ್ಬರಿ 1 ಕೆಜಿ 232 ಗ್ರಾಂ ಚಿನ್ನಾಭರಣ ಸೇರಿದಂತೆ ಒಟ್ಟು 1.84 ಕೋಟಿ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸ್ವತ್ತು: 1 ಕೆಜಿ 232 ಗ್ರಾಂ ಚಿನ್ನದ ಆಭರಣಗಳು, 1 ದ್ವಿಚಕ್ರ ವಾಹನ ಹಾಗೂ 1 ಮೊಬೈಲ್ ಫೋನ್.
ಒಟ್ಟು ಮೌಲ್ಯ: ಸುಮಾರು 1,84,00,000/-.

ಪತ್ತೆಯಾದ ಪ್ರಕರಣಗಳು: ಈತನ ಬಂಧನದಿಂದ ಬೈಯಪ್ಪನಹಳ್ಳಿ ಠಾಣೆಯ 3 ಹಾಗೂ ರಾಮಮೂರ್ತಿನಗರ ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು 4 ಕನ್ನ ಕಳವು ಪ್ರಕರಣಗಳು ಸುಖಾಂತ್ಯ ಕಂಡಿವೆ.
ಕಳೆದ ಅಕ್ಟೋಬರ್ನಲ್ಲಿ ಸದಾನಂದ ನಗರದ ಎನ್ಜಿಇಎಫ್ ಲೇಔಟ್ ನಿವಾಸಿಯೊಬ್ಬರು ಕುಟುಂಬ ಸಮೇತ ಕುಂದಾಪುರಕ್ಕೆ ತೆರಳಿದ್ದಾಗ, ಮನೆಯ ಬೀಗ ಮುರಿದಿದ್ದ ಕಳ್ಳರು 783 ಗ್ರಾಂ ಚಿನ್ನ ಹಾಗೂ 8 ಲಕ್ಷ ನಗದು ದೋಚಿದ್ದರು. ಈ ಬಗ್ಗೆ ದಾಖಲಾಗಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿದ್ದರು.
ಜನವರಿ 4 ರಂದು ಅಬ್ಬಿಗೆರೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಆತನನ್ನು ಬರೋಬ್ಬರಿ 28 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಕದ್ದ ಚಿನ್ನವನ್ನು ಕಮ್ಮಗೊಂಡನಹಳ್ಳಿ, ಅಬ್ಬಿಗೆರೆ, ಹೆಚ್ಎಂಟಿ ಲೇಔಟ್ ಹಾಗೂ ಗೋವಾದಲ್ಲಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಸತತ ಕಾರ್ಯಾಚರಣೆ ನಡೆಸಿ ವಿವಿಧೆಡೆಯಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದ ಕಾರ್ಯಾಚರಣೆಯನ್ನು ಡಾ|| ವಿಕ್ರಮ ಅಮಟೆ, ಐ.ಪಿ.ಎಸ್, ಉಪ ಪೊಲೀಸ್ ಆಯುಕ್ತರು, ಪೂರ್ವ ವಿಭಾಗ ರವರ ಮಾರ್ಗದರ್ಶನದಲ್ಲಿ, ಶ್ರೀ ಟಿ ರಂಗಪ್ಪ, ಸಹಾಯಕ ಪೊಲೀಸ್ ಆಯುಕ್ತರು, ಹಲಸೂರು ಉಪ ವಿಭಾಗ ರವರ ನೇತೃತ್ವದಲ್ಲಿ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಶಿವಕುಮಾರ.ಪಿ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.








