ನಗರದ ವಿವಿಧೆಡೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜಾಲದ ಪತ್ತೆ.ಬೆಂಗಳೂರು ನಗರವನ್ನು ಡ್ರಗ್ಸ್ ಮುಕ್ತವಾಗಿಸುವ ನಿಟ್ಟಿನಲ್ಲಿ ಸಿಸಿಬಿ (CCB) ಮತ್ತು ವಿವಿಧ ವಿಭಾಗದ ಪೊಲೀಸರು ಜಂಟಿಯಾಗಿ ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ, ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಹೊರರಾಜ್ಯದ ವ್ಯಕ್ತಿಗಳೂ ಸೇರಿದಂತೆ ಒಟ್ಟು 24 ಆರೋಪಿಗಳನ್ನು ಬಂಧಿಸಲಾಗಿದೆ.
ವಶಪಡಿಸಿಕೊಂಡ ಮಾದಕ ವಸ್ತುಗಳು: 76 ಕೆಜಿ ಗಾಂಜಾ, 11 ಕೆಜಿ 600 ಗ್ರಾಂ ಚರಸ್, 1 ಕೆಜಿ 23 ಗ್ರಾಂ ಹೈಡ್ರೋ ಗಾಂಜಾ ಹಾಗೂ 121 ಗ್ರಾಂ ಎಂಡಿಎಂಎ (MDMA).
ಒಟ್ಟು ಮೌಲ್ಯ: ಜಪ್ತಿ ಮಾಡಲಾದ ಡ್ರಗ್ಸ್‌ನ ಅಂತರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 2,08,00,000/- (ಎರಡು ಕೋಟಿ ಎಂಟು ಲಕ್ಷ ರೂಪಾಯಿ).
ದಾಳಿ ನಡೆದ ಪ್ರದೇಶಗಳು: ಕುಮಾರಸ್ವಾಮಿ ಲೇಔಟ್, ಹೆಬ್ಬಾಳ, ಜೆ.ಸಿ. ನಗರ, ಬಸವನಗುಡಿ, ಗೋವಿಂದರಾಜನಗರ ಹಾಗೂ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಬಂಧಿತ ಆರೋಪಿಗಳು ಹೆಚ್ಚಿನ ಹಣದ ಆಸೆಗೆ ಬಿದ್ದು ಅಪರಿಚಿತ ಮೂಲಗಳಿಂದ ಡ್ರಗ್ಸ್ ಖರೀದಿಸಿ ತರುತ್ತಿದ್ದರು. ಇದನ್ನು ನಗರದ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಐಟಿ-ಬಿಟಿ ಉದ್ಯೋಗಿಗಳಿಗೆ ಗುರಿಯಾಗಿಸಿ ಮಾರಾಟ ಮಾಡುತ್ತಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.
ಸಿಸಿಬಿ ಮತ್ತು ಬೆಂಗಳೂರಿನ ವಿವಿಧ ವಿಭಾಗಗಳ ಡಿಸಿಪಿಗಳಾದ ಶ್ರೀ ಬಿ.ಎಲ್. ಶ್ರೀಹರಿಬಾಬು, ಶ್ರೀ ರಾಜಾ ಇಮಾಮ್ ಕಾಸಿಂ, ಶ್ರೀಮತಿ ಅನಿತಾ ಬಿ. ಹದ್ದಣ್ಣವರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಕಿಂಗ್‌ಪಿನ್‌ಗಳ ಪತ್ತೆಗಾಗಿ ತನಿಖೆ ತೀವ್ರಗೊಂಡಿದೆ.








